ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಸರ್ಕಾರ ಕೊಂಚ ರೀಲೀಫ್ ನೀಡಿದೆ. ಈ ನಿಟ್ಟಿನಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಇಳಿಸಲು ಮುಂದಾಗಿದೆ.
ಜನಸಂಖ್ಯೆ ಆಧಾರದಲ್ಲಿ ದರ ನಿಗದಿ ಮಾಡಿರುವ ನಗರಾಭಿವೃದ್ಧಿ ಇಲಾಖೆ ಕಳೆದ ತಿಂಗಳು ಕರಡು ಸೂಚನೆ ಪ್ರಕಟಿಸಿದೆ. ಈ ಹಿಂದೆ ಜಾರಿಯಲ್ಲಿದ್ದ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ವಿಧಿಸುವ ನಿಯಮವನ್ನು ಕೈಬಿಟ್ಟಿದೆ. ಸ್ಥಳೀಯ ಪ್ರಾಧಿಕಾರ ದಲ್ಲಿರುವ ಜನಸಂಖ್ಯೆ ಹಾಗೂ ಮಾರ್ಗಸೂಚಿ ದರವನ್ನು ಆಧರಿಸಿ ಪರಿಷ್ಕೃತ ದರ ನಿಗದಿ ಮಾಡಲಾಗಿದೆ. ಒಟ್ಟಾರೆ, ವಸತಿ, ಕೈಗಾರಿಕೆ, ವಾಣಿಜ್ಯ- ಹೀಗೆ ಆಯಾ ಕಟ್ಟಡದ ಮಾರ್ಗಸೂಚಿ ದರದ ಒಟ್ಟು ಮೌಲ್ಯದ ಶೇ. 0.1 ರಿಂದ ಶೇ. 0.5 ರವರೆಗೆ ಶುಲ್ಕ ವಿಧಿಸಲಾಗುತ್ತಿದೆ.
ಕರ್ನಾಟಕ ಯೋಜನಾ ಪ್ರಾಧಿಕಾರದ ನಿಯಮ-1965ಕ್ಕೆ ಸೆಕ್ಷನ್ 37 ಎ ಅನುಸಾರ ತಿದ್ದುಪಡಿ ಮಾಡಿ, ಶುಲ್ಕ ಇಳಿಕೆ ಮಾಡಿದ ಪಟ್ಟಿ ಬಿಡುಗಡೆ ಮಾಡಿದೆ. ಈ ಕರಡು ಪಟ್ಟಿ ಅನ್ವಯವಾಗುವ ನಿವಾಸಿಗಳು 30 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ರಾಜ್ಯದಲ್ಲಿ 1993 ರಿಂದ ಕಟ್ಟಡದ ಪ್ರತಿ ಚದರ ಅಡಿಗೆ 20 ರೂ. ಕನಿಷ್ಠ ದರದ ಆಧಾರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ವಿಧಿಸುವ ನಿಯಮ ಜಾರಿಯಲ್ಲಿತ್ತು. ಅದನ್ನು ಪರಿಷ್ಕರಿಸಿ 2020ರ ಫೆ. 25 ರಿಂದ ಪೂರ್ವಾನ್ವಯವಾಗುವಂತೆ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು.
ಪೂರ್ವಾನ್ವಯವಾಗುವಂತೆ ವಸತಿ ಕಟ್ಟಡಕ್ಕೆ ಶೇ. 0.5 ಕೈಗಾರಿಕಾ ಕಟ್ಟಡಗಳಿಗೆ ಶೇ. 1 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 1.5 ಕಟ್ಟಡ ನಕ್ಷೆ ಶುಲ್ಕ ಹೆಚ್ಚಿಸಿ ಸೆಪ್ಟೆಂಬರ್ ನಲ್ಲಿ ಆದೇಶ ಹೊರಡಿಸಲಾಗಿತ್ತು. ಲಾಕ್ ಡೌನ್ ನಿಂದ ಜನರು ಆರ್ಥಿಕ ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ವಾಣಿಜ್ಯ ಕಟ್ಟಡ ನಿರ್ಮಾಣದ ಶುಲ್ಕ ಶೇ. 1.5 ಹೆಚ್ಚಳ ವಿರೋಧಿಸಿದ್ದರಿಂದ ಪರಿಷ್ಕೃತ ದರದಲ್ಲಿ ವಾಣಿಜ್ಯ ಕಟ್ಟಡಗಳ ಶುಲ್ಕವನ್ನು ಕೈಗಾರಿಕಾ ಶುಲ್ಕಕ್ಕಿಂತ ಕಡಿಮೆ ಮಾಡಿದೆ.
ಕಟ್ಟಡ ನಕ್ಷೆ ಪರಿಷ್ಕೃತ ದರದ ವಿವರ: (ಚದರ ಮೀಟರ್ಗೆ ನಿಗದಿ, ಮಾರುಕಟ್ಟೆ ದರ ಆಧರಿಸಿ)
ಸ್ಥಳೀಯ ಆಡಳಿತ ಸಂಸ್ಥೆ ಮತ್ತು ಜನಸಂಖ್ಯೆ:
ಬೆಂಗಳೂರು ಮಹಾನಗರ - ವಸತಿ ( ಶೇ 0.2-100 ರೂ),
ವಾಣಿಜ್ಯ- (ಶೇ.0.3, 200 ರೂ.),
ಕೈಗಾರಿಕೆ- (ಶೇ. 0.5, 350 ರೂ.),
ಇತರೆ- (ಶೇ.0.2, 100 ರೂ.).
ಒಂದರಿಂದ ಹತ್ತು ಲಕ್ಷ ಜನಸಂಖ್ಯೆ:
ವಸತಿ- (ಶೇ. 0.1, 20 ರೂ.),
ವಾಣಿಜ್ಯ-(ಶೇ. 0.3, 40 ರೂ.),
ಕೈಗಾರಿಕೆ-(ಶೇ.0.5, 60 ರೂ.),
ಇತರೆ- (ಶೇ. 0.1, 20 ರೂ.).
ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ:
ವಸತಿ- (ಶೇ. 0.2, 100 ರೂ.),
ವಾಣಿಜ್ಯ- (ಶೇ. 0.3, 200 ರೂ.),
ಕೈಗಾರಿಕೆ-(ಶೇ. 0.5, 350 ರೂ.),
ಇತರೆ- (ಶೇ. 0.2, 100 ರೂ.).
ಐವತ್ತು ಸಾವಿರದಿಂದ ಒಂದು ಲಕ್ಷ ಜನಸಂಖ್ಯೆ:
ವಸತಿ-(ಶೇ. 0.1, 15 ರೂ.),
ವಾಣಿಜ್ಯ-(ಶೇ.0.3, 25 ರೂ.),
ಕೈಗಾರಿಕೆ-(ಶೇ. 0.5, 30 ರೂ.),
ಇತರೆ- (ಶೇ.0.1, 15 ರೂ.).
ಇಪ್ಪತ್ತರಿಂದ ಐವತ್ತು ಸಾವಿರ ಜನಸಂಖ್ಯೆ:
ವಸತಿ- (ಶೇ.0.1, 10 ರೂ.),
ವಾಣಿಜ್ಯ- (ಶೇ. 0.3, 15 ರೂ.),
ಕೈಗಾರಿಕೆ-( ಶೇ.0.5, 20 ರೂ.),
ಇತರೆ- (ಶೇ.0.1, 10 ರೂ.).
ಇಪ್ಪತ್ತು ಸಾವಿರ ಒಳಗಿನ ಜನಸಂಖ್ಯೆ:
ವಸತಿ-(ಶೇ.0.1, 5 ರೂ.),
ವಾಣಿಜ್ಯ-(ಶೇ.0.3, 10 ರೂ.),
ಕೈಗಾರಿಕೆ-(ಶೇ.0.5, 15 ರೂ.),
ಇತರೆ- (ಶೇ. 01, 5 ರೂ.).