ಬೆಂಗಳೂರು: ಹೊರರಾಜ್ಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣಿಕರು ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ರಿಪೋರ್ಟ್ ಹೊಂದಿರುವುದನ್ನು ಪಾಲಿಕೆ ಕಡ್ಡಾಯ ಮಾಡಿದೆ.
ಅಲ್ಲದೆ ಬಸ್‌ನಿಲ್ದಾಣ, ಮಾರುಕಟ್ಟೆ, ಮಾಲ್‌ಗಳು, ಮದುವೆ ಮಂಟಪ, ಚಿತ್ರಮಂದಿರ ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು ಎಂದೂ ಸೂಚಿಸಲಾಗಿದೆ.
ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ನಡೆಸಿದ ವರ್ಚುವಲ್ ಸಭೆಯಲ್ಲಿ ಆಯುಕ್ತರು ತಿಳಿಸಿದ್ದಾರೆ. ಅಲ್ಲದೆ ನೆಗೆಟಿವ್ ವರದಿ ಪಡೆದು ನಗರಕ್ಕೆ ಬಂದಿರುವವರ ಪಟ್ಟಿ ಪಡೆದು, ಏಳನೇ ದಿನ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಬೇಕು. ಅಲ್ಲದೆ ನಗರದ ವಿವಿಧೆಡೆ ಸ್ವಾಬ್ ಟೆಸ್ಟ್ ಮಾಡುವಾಗ ಸರಿಯಾದ ಮಾಹಿತಿ, ವಿಳಾಸ, ಫೋನ್ ನಂಬರ್ ಕಲೆ ಹಾಕಬೇಕು ಎಂದು ಮಾಹಿತಿ ನೀಡಿದ್ದಾರೆ.
ಒಬ್ಬ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೇ, ಬೂತ್ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿಯನ್ನು ಸಹಾಯ ಕಂದಾಯ ಅಧಿಕಾರಿಗಳಿಗೆ ನೀಡಬೇಕು. ಪ್ರಾಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಪಾಸಿಟಿವ್ ಆದ ವ್ಯಕ್ತಿಯ ಸಂಪರ್ಕದಲ್ಲಿದ್ದವರಿಗೆಲ್ಲ ಪರೀಕ್ಷೆ ಮಾಡಬೇಕು. ಅಲ್ಲದೆ, ಔಷಧ ಮಳಿಗೆಗಳಲ್ಲಿ ಮಾತ್ರೆಗಳನ್ನು ಪಡೆದವರ ಮಾಹಿತಿ ಸಂಗ್ರಹಿಸಿಕೊಂಡು ಪರೀಕ್ಷೆಗೊಳಪಡಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಕೋವಿಡ್ ರಿಪೋರ್ಟ್: ನಗರದಲ್ಲಿಂದು 1756 ಸೋಂಕಿತರು ಪತ್ತೆ
ವಲಯಮಟ್ಟದ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿ ಗಮನಿಸುತ್ತಿರಬೇಕು. ಸ್ವಾಬ್ ಸಂಗ್ರಹ ಕೋವಿಡ್ ಪ್ರಕರಣಗಳ ಬಗ್ಗೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು, ಸರಿಯಾಗಿ ಕೆಲಸ ಮಾಡದ ಬೇಜವಾಬ್ದಾರಿ ತೋರುವವರನ್ನು ಅಮಾನತು ಮಾಡಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.