ಬೆಂಗಳೂರು: ಆರ್.ಆರ್. ನಗರದ ಕಾಂಗ್ರೆಸ್ ಕಾರ್ಪೊರೇಟರ್ಗಳು ಇಂದು ಬಿಜೆಪಿ ಸೇರಿದ್ದು ಇದು ಕೇವಲ ಟ್ರೈಲರ್ ಮಾತ್ರ, ಸಿನಿಮಾ ಬೇರೆಯೇ ಇದೆ. ಐದಾರು ದಿನದ ನಂತರ ಬೂತ್ ಏಜೆಂಟರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಾಂಗ್ರೆಸ್ಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಆರ್.ಆರ್. ನಗರ ಕಾಂಗ್ರೆಸ್ ಕಾರ್ಪೊರೇಟರ್ಗಳು ಮತ್ತು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಆರ್.ಆರ್. ನಗರದಲ್ಲಿ 9 ವಾರ್ಡ್ಗಳು ಇವೆ. ಅದರಲ್ಲಿ ಮೂರು ಬಿಜೆಪಿ ಗೆದ್ದಿದ್ದು, ಐದು ಕಾಂಗ್ರೆಸ್ ಪಾಲಾಗಿವೆ. ಆದರೆ, ಅವರೆಲ್ಲರ ಬಿಜೆಪಿ ಸೇರ್ಪಡೆಯಿಂದ ಈಗ ಎಲ್ಲಾ ವಾರ್ಡ್ಗಳಲ್ಲಿ ಬಿಜೆಪಿಯದ್ದೇ ಅಲೆ ಎದ್ದಿದೆ. ಒಬ್ಬ ಕಾರ್ಪೊರೇಟರನ್ನು ಉಳಿಸಿಕೊಳ್ಳಲು ಅವರಿಗೆ ಆಗಲಿಲ್ಲ. ಇನ್ನೂ ಐದಾರು ದಿನ ಕಳೆದರೆ, ಬೂತ್ ಏಜೆಂಟ್ರು ಕೂಡ ಕಾಂಗ್ರೆಸ್ ಸಿಗಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಸಂಸದ ಡಿ.ಕೆ. ಸುರೇಶ್, ಕುಸುಮಾ ಅಭ್ಯರ್ಥಿ ಆದರೂ ಕೂಡ ನನ್ನ ಮುಖ ನೋಡಿ ಮತ ನೀಡಿ, ನಾನೇ ಅಭ್ಯರ್ಥಿ ಇದ್ದಂತೆ ಎಂದಿದ್ದಾರೆ. ಇದರಿಂದ ಅವರ ಪಕ್ಷದ ಅಭ್ಯರ್ಥಿಯನ್ನು ಅವರೇ ಪಕ್ಕಕ್ಕೆ ತಳ್ಳಿದಂತಾಗಿದೆ. ಇಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ 27 ರಿಂದ 30 ಸಾವಿರ ಕಡಿಮೆ ಮತ ಬಂದಿವೆ. ನೀವು ಆಗಲೇ ಫೇಲ್ ಆಗಿದ್ದಿರಿ, ಈಗ ಅಟ್ಟರ್ ಫ್ಲಾಪ್ ಆಗಲಿದ್ದೀರಿ. ಇದು ಟ್ರೈಲರ್ ಅಷ್ಟೇ, ಇನ್ನು ಮೂರು ನಾಲ್ಕು ದಿನದಲ್ಲಿ ಇನ್ನಷ್ಟು ಜನ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಬರಲಿದ್ದಾರೆ. ಸಿನಿಮಾ ಬೇರೆಯೇ ಇದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಮಾತನಾಡಿ, ಆರ್.ಆರ್. ನಗರದ ಚುನಾವಣೆಯಲ್ಲಿ ಕಾಂಗ್ರೆಸ್ನವರು ಜಾತಿ ರಾಜಕೀಯ ಆರಂಭಿಸಿದ್ದಾರೆ. ಆದರೆ, ಯಾವ ಜಾತಿಗೂ ಮುನಿರತ್ನ ಅನ್ಯಾಯ ಮಾಡಿಲ್ಲ. ಎಲ್ಲಾ ಜಾತಿಗಳನ್ನು ಸಮಾನವಾಗಿ ನೋಡಿದ್ದಾರೆ. ಹಾಗಾಗಿ ಮುನಿರತ್ನ ಗೆಲುವಿನ ಅಭಿಯಾನ ಮುಂದುವರೆಯಲಿದೆ. 4.76 ಲಕ್ಷದಷ್ಟು ಮತದಾರರು ಕ್ಷೇತ್ರದಲ್ಲಿದ್ದು, ಅವರನ್ನೆಲ್ಲಾ ಮತಗಟ್ಟೆಗೆ ಕರೆತರುವ ಬಹುದೊಡ್ಡ ಸವಾಲು ನಮಗಿದೆ. ಮತಹಾಕಲು ಬರುವ ಜನರಲ್ಲಿ ಮುಕ್ಕಾಲುಪಾಲು ಜನ ಬಿಜೆಪಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಿತ್ತು. ಮುಂದೆಯೂ ನಿಶ್ಚಿತವಾಗಿ ಕಮಲ ಅರಳಲಿದೆ. ಬಿಬಿಎಂಪಿ ಚುನಾವಣೆಗೂ ಮೊದಲು ಟ್ರೈಲರ್ ಬಂದ ಹಾಗೆ ಈಗ ಉಪಚುನಾವಣೆಗೂ ಬಂದಿದೆ ಎಂದರು.
ಇನ್ನು, ಅಭ್ಯರ್ಥಿ ಮುನಿರತ್ನ ಮಾತನಾಡಲು ನಿರಾಕರಿಸಿದರು. ಪಕ್ಷದ ನಾಯಕರು ಒತ್ತಾಯಿಸಿದಾಗ ಮೈಕ್ ಹಿಡಿದು, ನಾನು ಈಗ ಏನೂ ಮಾತನಾಡಲ್ಲ. ಎಲ್ಲಾ ನಾಯಕರು ಮಾತನಾಡಿದ್ದಾರೆ. ಚುನಾವಣೆ ಗೆದ್ದ ನಂತರ ನಾವು ಮಾತನಾಡೋಣ ಎಂದರು.
ಸಾಮಾಜಿಕ ಅಂತರ ಉಲ್ಲಂಘನೆ: ಕಾರ್ಪೊರೇಟರ್ಗಳ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ನಿಯಮವನ್ನು ಉಲ್ಲಂಘಿಸಲಾಗಿತ್ತು. ಆರಂಭದಲ್ಲಿ ಎಲ್ಲರೂ ಮಾಸ್ಕ್ ಧರಿಸಿದ್ದರೂ, ಪಕ್ಷ ಸೇರ್ಪಡೆ ನಂತರ ಗ್ರೂಪ್ ಫೋಟೋ ತೆಗೆಸಿಕೊಳ್ಳುವಾಗ ಮಾಸ್ಕ್ಗಳು ಮಾಯವಾಗಿದ್ದು ಕಂಡುಬಂತು.