ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಹಿನ್ನೆಲೆ ನಿನ್ನೆ ಮತದಾನ ಪ್ರಕ್ರಿಯೆ ಮುಗಿದಿದೆ. ಸದ್ಯ ಮತಯಂತ್ರಗಳನ್ನ ಇಟ್ಟಿರುವ ಆರ್ ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಸ್ಟ್ರಾಂಗ್ ರೂಂಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಮೂರು ಹಂತಗಳಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು ಸ್ಟ್ರಾಂಗ್ ರೂಂ ಸುತ್ತ ಹಾಗೂ ದ್ವಾರದ ಬಳಿ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಹಾಗೇ ಎರಡನೇ ಹಂತದಲ್ಲಿ ನಗರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಶಾಲೆಯ ಹೊರ ಆವರಣದಲ್ಲಿ ಕೆಎಸ್ಆರ್ಪಿ ತುಕಡಿಯಿಂದ ಭದ್ರತೆಯಿದ್ದು, ಮೂರು ಪಾಳಿಯಂತೆ ಪೊಲೀಸರಿಂದ ಸ್ಟ್ರಾಂಗ್ ರೂಂಗೆ ಭದ್ರತೆ ಒದಗಿಸಲಾಗಿದೆ.
ಪ್ರತಿ ಪಾಳಿಗೆ 150 ಪೊಲೀಸರು, ಓರ್ವ ಎಸಿಪಿ, ಮೂವರು ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಭದ್ರತೆಯಿದ್ದು, ಸ್ಟ್ರಾಂಗ್ ರೂಂ ಹಾಗೂ ಶಾಲೆಯ ಸುತ್ತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದನ್ನು ಸಿಸಿಟಿವಿಗಳ ಮೂಲಕ ಮಾನಿಟರ್ ಮಾಡಲಾಗುತ್ತಿದೆ.
ಪೊಲೀಸರು ಮತ್ತು ಚುನಾವಣಾ ಆಧಿಕಾರಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಶಾಲೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೆ ಶಾಲಾ ವ್ಯಾಪ್ತಿ ಬಳಿ ಪ್ರತಿ ವಾಹನ, ವ್ಯಕ್ತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.