ಬೆಂಗಳೂರು : ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಕಾನೂನಾತ್ಮಕವಾಗಿ ತಾತ್ಕಾಲಿಕ ಅಂತ್ಯ ಕಂಡಿರಬಹುದು. ಆದರೆ, ಘಟನೆ ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಆರೋಪಿಗಳು ಹೇಳಿದಂತೆ ಕೆಲಸದ ಕಾರಣಕ್ಕಾಗಿಯೇ ಬೆಂಕಿ ಹಚ್ಚಿದ್ರಾ? ಅಥವಾ ರೌಡಿಶೀಟರ್ ಒಬ್ಬನ ಕುಮ್ಮಕ್ಕಿತ್ತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅದೇ ರೀತಿ ಇಲ್ಲೊಬ್ಬ ರೌಡಿ ಕೂಡ ಎಲೆಕ್ಷನ್ಗೆ ನಿಂತಿದ್ದ. ಆತನ ಹೆಸರೇ ಸೋಮಶೇಖರ ಅಲಿಯಾಸ್ ಡೀಲ್ ಸೋಮ. ಈತನ ಹೆಸರು ಯಾಕೆ ಬಂತೆಂದರೆ ಈ ಸೋಮ ಎಲೆಕ್ಷನ್ಗೆ ನಿಂತಿದ್ದು, ಇದೇ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ. ಅದೂ ಸತೀಶ್ ರೆಡ್ಡಿ ವಿರುದ್ಧ. ಇಂತಹ ವ್ಯಕ್ತಿಯ ಹೆಸರು ಕಾರ್ ಸುಟ್ಟ ಕೇಸ್ನಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.
ರೌಡಿಶೀಟರ್ ಸೋಮಶೇಖರ್, ಇತ್ತೀಚೆಗೆ ಒಂದಷ್ಟು ಹುಡುಗರನ್ನ ಜೊತೆಯಲ್ಲಿಟ್ಟುಕೊಂಡು ಪಾರ್ಟಿ, ಫುಡ್ ಕಿಟ್ ವಿತರಣೆ, ಸಂಘಟನೆ ಎಂದು ಓಡಾಡುತ್ತಿದ್ದಾನೆ. ಸ್ವತಃ ಈತನ ತಮ್ಮನನ್ನ ನಾಯಕನಾಗಿ ಮಾಡಿ ನಶೆ, ಅಯ್ಯೋರಾಮ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿದ್ದಾನೆ.
ಡೀಲ್ ಸೋಮ ಬೊಮ್ಮನಹಳ್ಳಿ ಕ್ಷೇತ್ರದಿಂದ 2018ರಲ್ಲಿ ವಿಧಾನಸಭೆ ಎಲೆಕ್ಷನ್ಗೆ ನಿಂತಿದ್ದ. ಪ್ರಜಾ ಪರಿವರ್ತನಾ ಪಾರ್ಟಿ ಎಂಬ ಹೆಸರಿನ ಪಕ್ಷದಿಂದ ಸತೀಶ್ ರೆಡ್ಡಿ ವಿರುದ್ಧ ನಿಂತಿದ್ದ ಈತ ಎರಡೂವರೆ ಸಾವಿರ ವೋಟು ಗಿಟ್ಟಿಸಿಕೊಂಡು ಠೇವಣಿ ಕಳೆದುಕೊಂಡಿದ್ದ. ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದ ಡೀಲ್ ಸೋಮ ಎಲೆಕ್ಟ್ರಾನಿಕ್ ಸಿಟಿ ಬೊಮ್ಮನಹಳ್ಳಿ ಮಾರತ್ ಹಳ್ಳಿ ಕಡೆ ಬೆದರಿಸಿ ಭೂ ಒತ್ತುವರಿ ಕೆಲಸ ಮಾಡುತ್ತಿದ್ದ ಎಂಬ ಆರೋಪಗಳಿವೆ.
ಈ ವಿಚಾರ ಗೊತ್ತಾಗಿ ಶಾಸಕ ಸತೀಶ್ ರೆಡ್ಡಿ, ಡೀಲ್ ಸೋಮನ ಅಷ್ಟೂ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕುತ್ತಲೇ ಬಂದಿದ್ದರಂತೆ. ಇದು ಸೋಮನಿಗೆ ಸಹಿಸೋದಕ್ಕೆ ಆಗಲಿಲ್ಲ. ಅದೇ ಕಾರಣಕ್ಕೆ ಹುಡುಗರನ್ನ ಬಿಟ್ಟು ಕಾರುಗಳನ್ನು ಸುಟ್ಟು ಹಾಕಿಸಿರುವ ಸಾಧ್ಯತೆಯಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಯಾಕೆಂದರೆ, ಈ ಹಿಂದೆ ಮಾತನಾಡುವಾಗ ಸಿಕ್ಕಿಬಿದ್ದವರು ಕೇಬಲ್ ಹುಡುಗರು ಎಂದಿದ್ದರು. ಡೀಲ್ ಸೋಮನ ಮತ್ತೊಂದು ದಂಧೆ ಅಂದರೆ ಅದು ಕೇಬಲ್ ಮಾಫಿಯಾ. ಘಟನೆಯ ಬಳಿಕ ಡೀಲ್ ಸೋಮ ತಲೆಮರೆಸಿಕೊಂಡಿದ್ದಾನೆ. ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.
ಓದಿ: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ : 3 ರೀತಿ ಹೇಳಿಕೆಕೊಟ್ಟ ಆರೋಪಿಗಳು, ಪೊಲೀಸರಿಗೆ ತಲೆನೋವು