ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿನ ಬಹುತೇಕ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದ ರೌಡಿಶೀಟರ್ ಓರ್ವನ ವಿರುದ್ಧ ಗೂಂಡಾ ಕಾಯ್ದೆ ವಿಧಿಸಿ ಪೊಲೀಸರು ಬಂಧಿಸಿದ್ದಾರೆ.
ಜಮ್‌ಶೀದ್ ಖಾನ್ ಬಂಧಿತ ರೌಡಿ ಶೀಟರ್ ಆಗಿದ್ದು, ಈತ 2004ರಿಂದ 2020 ರವರೆಗೆ ಯಶವಂತಪುರ, ಪೀಣ್ಯ, ಆರ್‌ಎಂಸಿ ಯಾರ್ಡ್ ಸೇರಿದಂತೆ ಹಲವೆಡೆ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಆರೋಪಿಯ ವಿರುದ್ಧ ಕೊಲೆ ಯತ್ನ, ದರೋಡೆ, ಕೊಲೆ ಬೆದರಿಕೆ, ದೊಂಬಿ, ಕಳ್ಳತನ ಸೇರಿದಂತೆ 22 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಈತ ಜೈಲು ಪಾಲಾಗಿ ವಾಪಸಾಗಿದ್ದರೂ ಸಹ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಮಾತ್ರವಲ್ಲದೆ, ಇತ್ತೀಚೆಗೆ ಗಾಂಜಾ ಮಾರಾಟ ಮಾಡಿ ಉತ್ತರ ವಿಭಾಗ ಪೊಲೀಸರ ಕೈಗೆ ಸಿಕ್ಕಿಬಿದಿದ್ದ. ಹೀಗಾಗಿ ಸಮಾಜಕ್ಕೆ ಮಾರಕವಾಗಿರುವ ರೌಡಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿ ಯಶವಂತಪುರ ಪೊಲೀಸರು ಜೈಲಿಗಟ್ಟಿದ್ದಾರೆ.
ಗೂಂಡಾಕಾಯ್ದೆಯಡಿ ಈತನನ್ನು ಬಂಧಿಸಿರುವ ಕಾರಣ ಮತ್ತೆ ಜೈಲಿನಿಂದ ಹೊರಬರುವುದು ಬಹುತೇಕ ಅನುಮಾನವಾಗಿದೆ.