ಬೆಂಗಳೂರು: ಕೋರಮಂಗಲದ ಯೂನಿಯನ್ ಬ್ಯಾಂಕಿಗೆ ನುಗ್ಗಿ ರೌಡಿಶೀಟರ್ ಬಬ್ಲಿ ಹತ್ಯೆ ಮಾಡಿದ್ದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ಇದೇ ತಿಂಗಳು 19ರಂದು ಹೆಂಡತಿ - ಮಗು ಸಮೇತ ಜೋಸೆಫ್ ಅಲಿಯಾಸ್ ಬಬ್ಲಿ ಬ್ಯಾಂಕಿಗೆ ಬೈಕ್ನಲ್ಲಿ ಬಂದಿದ್ದನು. ಬ್ಯಾಂಕ್ ಮುಂದೆ ಬರುತ್ತಿದ್ದಂತೆ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳ ಗುಂಪು ಏಕಾಏಕಿ ಅಟ್ಯಾಕ್ ಮಾಡಿದೆ. ಇದರಿಂದ ಭಯಗೊಂಡು ತಪ್ಪಿಸಿಕೊಳ್ಳಲು ಬಬ್ಲಿ ಮುಂದಾಗಿದ್ದನು.
ಬೆನ್ನು ಬಿಡದ ಆರೋಪಿಗಳು ಬ್ಯಾಂಕಿಗೆ ನುಗ್ಗಿ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆ ಬಳಿಕ ಬೈಕ್ ಮೇಲೆ ಮಚ್ಚು ಎತ್ತಿ ಹಿಡಿದು ಗ್ಯಾಂಗ್ ಸಂಭ್ರಮಿಸಿದ್ದು, ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ರವಿ ಹಾಗೂ ಪ್ರದೀಪ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.
10 ರೌಡಿಗಳ ಬಂಧನ:
ರೌಡಿಶೀಟರ್ ಬಬ್ಲಿ ಕೊಲೆ ಪ್ರಕರಣ ಸಂಬಂಧ ಎಚ್ಚೆತ್ತುಕೊಂಡ ಆಡುಗೋಡಿ ಪೊಲೀಸರು ಸುಮಾರು 10ಕ್ಕೂ ಅಧಿಕ ಮಂದಿ ರೌಡಿಶೀಟರ್‌ಗಳನ್ನು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿಸಿದ್ದಾರೆ. ಬಬ್ಲಿ ಕೂಡ ಆಡುಗೋಡಿ ಠಾಣೆಯ ರೌಡಿಶೀಟರ್ ಆಗಿದ್ದು, ಕೊಲೆ, ಕೊಲೆ ಯತ್ನ, ದರೋಡೆಯಂತಹ ಪ್ರಕರಣಗಳಲ್ಲಿ ಈತನ ಭಾಮೈದ ಜಾರ್ಜ್ ಸೇರಿ ಕೆಲ ಪುಡಿ ರೌಡಿಗಳಿಗೆ ಸಹಾಯ ನೀಡುತ್ತಿದ್ದ. ಆದರೆ, ಈ ವಿಚಾರ ಪೊಲೀಸರಿಗೆ ತಿಳಿದಿರಲಿಲ್ಲ ಎಂದು ಹೇಳಲಾಗಿದೆ.