ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿವೆ. ವಾಹನಗಳನ್ನು ಟೋಯಿಂಗ್ ಮಾಡಿದ ತಕ್ಷಣ ಕೆಲವು ಪುಂಡರು ಗಲಾಟೆ ಮಾಡುವ ಪ್ರಸಂಗಗಳು ಹೆಚ್ಚಾಗಿವೆ. ಆದರೆ, ಇನ್ನುಮುಂದೆ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ, ಅಂತವರ ವಿರುದ್ಧ ಪೊಲೀಸರು ರೌಡಿಶೀಟ್ ತೆರೆಯಲಿದ್ದಾರೆ.
ಇತ್ತೀಚೆಗೆ ಯಲಹಂಕ ಮತ್ತು ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದರು. ಹಲ್ಲೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಸಂಚಾರ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ.
ಯಲಹಂಕದಲ್ಲಿ ಕಳೆದ ತಿಂಗಳ 28ರಂದು ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ವಿಜಯ್ ಮತ್ತು ರಾಜಶೇಖರ್ ಎಂಬಿಬ್ಬರನ್ನ ಬಂಧಿಸಲಾಗಿತ್ತು. ಈಗ ಅವರ ಮೇಲೆ 'ಸಿ' ಕ್ಯಾಟಗರಿ ರೌಡಿಶೀಟ್ ಓಪನ್ ಮಾಡಲಾಗಿದೆ. ಅಲ್ಲದೆ, ಇಂದಿರಾನಗರದಲ್ಲಿ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕೆಂಚೇಗೌಡ, ಪಾಷ ಎಂಬುವರ ವಿರುದ್ಧ ರೌಡಿಶೀಟ್ ಓಪನ್ ಮಾಡಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: Video: ಬೆಂಗಳೂರಿನಲ್ಲಿ ಟೋಯಿಂಗ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹೊಡೆದ ಸಾರ್ವಜನಿಕರು..
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಸಂಚಾರ ಇಲಾಖೆಯ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ, ಪಾರ್ಕಿಂಗ್ ಎಂದು ಬೋರ್ಡ್ ಇಲ್ಲ ಅಂದ್ರೆ, ಅದು ನೋ ಪಾರ್ಕಿಂಗ್ ಅಂತಾನೇ ಅರ್ಥ. ಟೋಯಿಂಗ್ ಸಿಬ್ಬಂದಿಗೆ ಅವರದೇ ಆದ ಮಾನದಂಡಗಳಿವೆ, ಅದನ್ನು ಅವರು ಪಾಲಿಸಬೇಕು.
ಟೋಯಿಂಗ್ ಸಿಬ್ಬಂದಿಯು ಕಾನೂನು ನಿಯಮ ಉಲ್ಲಂಘಿಸಿರುವುದು ಅಥವಾ ಅನುಚಿತ ವರ್ತನೆ ತೋರುವುದು ಕಂಡು ಬಂದರೆ ನಮ್ಮ ಗಮನಕ್ಕೆ ತರಬೇಕು ಹೊರತು ಬೈಕ್ ಟೋಯಿಂಗ್ ಮಾಡುತ್ತಾರೆ ಎಂದು ಸಾರ್ವಜನಿಕರು ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ತಪ್ಪು. ಈಗಾಗಲೇ ಟೋಯಿಂಗ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ರೌಡಿಶೀಟ್ ಹಾಕಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ