ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದ ಆರೋಪಿ, ಮಾಜಿ ಸಚಿವ ಆರ್. ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಮುಂದಿನ ಒಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರಾದ ಇಮ್ರಾನ್ ಪಾಷಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ರೋಷನ್ ಬೇಗ್ ಆಸ್ತಿ ಜಪ್ತಿ ವಿಚಾರವಾಗಿ ಕೈಗೊಂಡಿರುವ ಕ್ರಮಗಳ ಕುರಿತು ಸರ್ಕಾರಿ ವಕೀಲರಿಗೆ ಮಾಹಿತಿ ಕೇಳಿತು. ರಾಜ್ಯ ಸರ್ಕಾರದ ಪರ ವಕೀಲರು, ಲಾಕ್ ಡೌನ್ ಕಾರಣ ಬೇಗ್ ಆಸ್ತಿ ಜಪ್ತಿಗೆ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂದರು.
ಸರ್ಕಾರದ ಕಾರಣ ಒಪ್ಪದ ಪೀಠ, ಲಾಕ್ ಡೌನ್ ಗೂ ಜಪ್ತಿ ಮಾಡುವುದರಲ್ಲಿನ ವಿಳಂಬಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಏಪ್ರಿಲ್ನಲ್ಲೇ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ. ಹಾಗಿದ್ದೂ ಕ್ರಮ ಜರುಗಿಸಿಲ್ಲ. ಒಂದು ವೇಳೆ ಅವರು ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ. ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ಕಾರ್ಯ ವಿಳಂಬ ಮಾಡುತ್ತಿರುವ ಆರೋಪವಿದೆ. ಸಾರ್ವಜನಿಕರ ಸ್ವತ್ತು ರಕ್ಷಿಸಬೇಕಿರುವ ಸರ್ಕಾರದ ಇಂತಹ ನಡವಳಿಕೆಗಳನ್ನು ಒಪ್ಪಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ, ಒಂದು ವಾರದಲ್ಲಿ ರೋಷನ್ ಬೇಗ್ ಅವರ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿತು.
ಸಿಬಿಐ ಪರ ವಕೀಲ ಪಿ. ಪ್ರಸನ್ ಕುಮಾರ್ ಮಾಹಿತಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಮುಗಿದಿದೆ. ಆರೋಪಿ ರೋಷನ್ ಬೇಗ್ ವಿರುದ್ಧ ಆರೋಪಪಟ್ಟಿ ಕೂಡ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಠೇವಣಿ ಹಣ ವಾಪಸ್ ಕೋರಿ ಹೂಡಿಕೆದಾರರು ಎಷ್ಟು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈವರೆಗೆ ಎಷ್ಟು ಹಣ ಹಿಂದಿರುಗಿಸಲಾಗಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.