ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸ್ಥಾನ ಉಳಿಸಿಕೊಳ್ಳಲು ಕೊನೇಯ ಪ್ರಯತ್ನವಾಗಿ ಸಿಎಂ ಮನೆ ಬಾಗಿಲು ಬಡಿದಿದ್ದ ರೋಹಿಣಿ ಸಿಂಧೂರಿ, ಮುಖ್ಯಮಂತ್ರಿಗಳಿಂದ ಮನವಿಗೆ ಸ್ಪಂದನೆ ಸಿಗದೆ ನಿರಾಶರಾಗಿ ಮರಳಿದರು.
ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತೆ ನಡುವಿನ ಜಟಾಪಟಿ ಇತ್ಯರ್ಥಕ್ಕೆ ಸರ್ಕಾರ ನಿನ್ನೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಗೆ ಮತ್ತು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಆರ್ಡಿಪಿಆರ್ ಇ-ಆಡಳಿತದ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಗೆ ತಡೆ ಕೋರಲು ರೋಹಿಣಿ ಸಿಂಧೂರಿ ಪ್ರಯತ್ನ ನಡೆಸಿದ್ದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಖಾಸಗಿ ಕಾರಿನಲ್ಲಿ ಆಗಮಿಸಿ ಸಿಎಂ ಭೇಟಿಯಾದರು. ಈ ಸಂದರ್ಭದಲ್ಲಿ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿ ತಮ್ಮನ್ನು ಸಮರ್ಥಿಸಿಕೊಂಡರು. ಅಲ್ಲದೆ, ವರ್ಗಾವಣೆ ಆದೇಶದ ಮರುಪರಿಶೀಲನೆಗೆ ಮನವಿ ಮಾಡಿದರು.
ಆದರೆ, ರೋಹಿಣಿ ಸಿಂಧೂರಿ ಮನವಿಯನ್ನು ಪುರಸ್ಕರಿಸದ ಸಿಎಂ, ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ನಿರಾಶರಾಗಿ ಸಿಎಂ ನಿವಾಸದಿಂದ ರೋಹಿಣಿ ಸಿಂಧೂರಿ ಹೊರನಡೆದರು.
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ಬಂದಿದ್ದರು. ವರ್ಗಾವಣೆಯಾದ ನಂತರ ಮತ್ತೆ ಮರು ಪರಿಶೀಲನೆ ಮಾಡುವ ಪ್ರಶ್ನೆ ಉದ್ಭವವಾಗಲ್ಲ. ಕೂಡಲೇ ವರ್ಗಾವಣೆಗೊಂಡ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಇದನ್ನೂ ಓದಿ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್ ಎತ್ತಂಗಡಿ: IAS ಮಹಿಳಾಮಣಿಗಳ ಜಗಳಕ್ಕೆ ಈ ಶಿಕ್ಷೆ!