ಬೆಂಗಳೂರು: ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಆಯ್ದ 200 ಯುವಕರಿಗೆ ಕೆಲಸ ಕೊಡಿಸಿ ಆ ಮೂಲಕ ಅಪರಾಧ ತಡೆಯುವ ಹೊಸ ಯೋಜನೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಕೈ ಹಾಕಿದ್ದಾರೆ.
ಕಾನೂನಿನ ಬಗ್ಗೆ ಮಾಹಿತಿ ಹಾಗೂ ಅಪರಾಧದ ಮನೋಭಾವನೆ ಹೋಗಲಾಡಿಸಲು ಸ್ಲಂನಲ್ಲಿ ವಾಸ ಮಾಡುವ ಯುವಕರೊಂದಿಗೆ ಇತ್ತೀಚೆಗೆ ಕ್ರಿಕೆಟ್ ಆಡುವ ಮೂಲಕ ಅವರ ಮನಗೆದ್ದಿದ್ದ ದಕ್ಷಿಣ ವಿಭಾಗದ ಪೊಲೀಸರು, ಇದೀಗ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಸಾಮಾಜಿಕ ಜವಾಬ್ದಾರಿ ಮರೆದಿದ್ದಾರೆ.
ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆಯ್ದ 200 ಯುವಕರಿಗೆ ಸೆಕ್ಯೂರಿಟಿ ಕೆಲಸ ಕೊಡಿಸಲು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸಫೆಟ್ ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ದಕ್ಷಿಣ ವಿಭಾಗದಲ್ಲಿ 17 ಪೊಲೀಸ್ ಠಾಣೆಗಳು ಬರಲಿದ್ದು, ಈ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸ್ಲಂಗಳಿವೆ. ಇಲ್ಲಿ ವಾಸ ಮಾಡುವ ಬಹುತೇಕ ಅವಿದ್ಯಾವಂತರು. ಕೆಲವರು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಬಹುತೇಕರು ಕೆಲಸವಿಲ್ಲದೆ ಒಡಾಡಿಕೊಂಡಿರುತ್ತಾರೆ. ಕೆಲಸ ಇಲ್ಲದ ಕಾರಣ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇರುವುದರಿಂದ ಹಣಕ್ಕಾಗಿ ಕಳ್ಳತನ, ಸುಲಿಗೆ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆಯಿರುತ್ತದೆ. ಹದಿಹರೆಯದ ಯುವಕರಂತೂ ಮದ್ಯಸೇವನೆ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ. ಇದೇ ನಶೆಯಲ್ಲಿ ಅಪರಾಧ ಎಸಗಿ ಜೈಲು ಸೇರಿರುವ ನಿರ್ದೇಶನ ಕಾಣಬಹುದಾಗಿದೆ. ಹೀಗಾಗಿ ಅಪರಾಧದ ಮನೋಭಾವದಿಂದ ಹೊರಬಂದು ನಿರುದ್ಯೋಗಿಗಳಿಗೆ ಕೌಟುಂಬಿಕ ಜವಾಬ್ದಾರಿಗಾಗಿ ಕೆಲಸ ಕೊಡಿಸುವ ಕಾರ್ಯಕ್ಕೆ ಕೈ ಹಾಕಿರುವ ಪೊಲೀಸರ ಕಾರ್ಯ ನಿಜಕ್ಕೂ ಶಾಘ್ಲನೀಯ ಎಂದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.