ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ಆಗಂತುಕರು 80 ಲಕ್ಷ ರೂಪಾಯಿ ದೋಚಿದ ಘಟನೆ ನಗರದ ಘಟನೆ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತುಮಕೂರಿನಿಂದ ಸೇಲಂಗೆ ಕಾರಿನಲ್ಲಿ ಹಣ ಕೊಂಡೊಯ್ಯುತ್ತಿದ್ದ ಕುಮಾರಸ್ವಾಮಿ ಹಾಗೂ ಅವರ ಚಾಲಕ ಚಂದನ್ ಎಂಬವರನ್ನು ಅಡ್ಡಗಟ್ಟಿದ ಮೂವರು ಅಪರಿಚಿತರು ಕೃತ್ಯ ಎಸಗಿದ್ದಾರೆ.
ಅಡಿಕೆ ವ್ಯಾಪಾರದಲ್ಲಿ ಬಂದ ಆದಾಯವನ್ನು ಮಾಲೀಕ ಮೋಹನ್ ಎಂಬವರ ಸೂಚನೆಯಂತೆ ಡಿಸೆಂಬರ್ 27 ರಂದು ಮಧ್ಯಾಹ್ನ ಕುಮಾರಸ್ವಾಮಿ ಹಾಗೂ ಚಾಲಕ ಚಂದನ್ ಕಾರ್‌ನಲ್ಲಿ ಕೊಂಡೊಯ್ಯುತ್ತಿದ್ದರು. ಮಧ್ಯಾಹ್ನ 1:30ರ ಸುಮಾರಿಗೆ ಕೆ.ಹೆಚ್.ರಸ್ತೆಯ ರಿವೋಲಿ ಜಂಕ್ಷನ್ ಬಳಿ ಸಿಗ್ನಲ್ನಲ್ಲಿ ಕಾರು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ 'ಪೊಲೀಸ್' ಸ್ಟಿಕ್ಕರ್ ಅಂಟಿಸಿದ್ದ ಕಾರ್‌ನಿಂದ ಇಳಿದ ಮೂವರು ಅಪರಿಚಿತರು ತಾವು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ.
ಬಳಿಕ ಕಾರು ಹತ್ತಿ ತೆಲುಗು ಭಾಷೆಯಲ್ಲಿ ಅವರವರೇ ಮಾತನಾಡಿಕೊಂಡು ಲಾಠಿ ತೋರಿಸಿ ಬೆದರಿಸಿ 80 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ. ಮೊದಲು ಪೊಲೀಸರೇ ಬಂದಿರಬಹುದು ಎಂದು ಭಾವಿಸಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಬಂದವರು ನಕಲಿ ಪೊಲೀಸರು ಎಂದು ದೃಢಪಟ್ಟಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಹುರುಳಿ ಸೆತ್ತೆಯಿಂದಾಗಿ ಹೊತ್ತಿ ಉರಿದ ಕಾರು: ಪ್ರಾಣಾಪಾಯದಿಂದ 6 ಮಂದಿ ಪಾರು