ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಮೇಲೆ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತು ಸಂಗಡಿಗರು ಹಲ್ಲೆ ಮಾಡಿರುವ ಘಟನೆ ತಡರಾತ್ರಿ ರಿಚ್ಮಂಡ್ ಟೌನ್ನ ಕಾಜೇ ಬಾರ್ & ಕಿಚನ್ ಹೋಟೆಲ್‌ನಲ್ಲಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ರಿಕ್ಕಿ ರೈ ಮತ್ತು ಆತನ ಬೆಂಬಲಿಗರು ಹಳೆಯ ಪ್ರಕರಣದ ಜಿದ್ದಿನಲ್ಲಿ ನನ್ನನ್ನ ಅವಾಚ್ಯವಾಗಿ ನಿಂದಿಸಿ ಥಳಿಸಿದ್ದಾರೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆಗೆ ಶ್ರೀನಿವಾಸ್ ನಾಯ್ಡು ದೂರು ನೀಡಿದ್ದಾರೆ.
ರಿಕ್ಕಿ ರೈ V/s ಶ್ರೀನಿವಾಸ್ ನಾಯ್ಡು: 2021ರ ಅಕ್ಟೋಬರ್ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್ಮೆಂಟ್ನಲ್ಲಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರಿಗೆ ಬೆಂಕಿಯಿಟ್ಟ ಆರೋಪ ರಿಕ್ಕಿ ರೈ ಹಾಗೂ ಆತನ ಬೆಂಬಲಿಗರ ಮೇಲಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸದಾಶಿವನಗರ ಠಾಣಾ ಪೊಲೀಸರು 10 ಜನ ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ಆರೋಪಿಗಳು ರಿಕ್ಕಿ ರೈ ಸೂಚನೆ ಅನ್ವಯ ಕಾರನ್ನು ಸುಟ್ಟಿರುವುದಾಗಿ ಹೇಳಿಕೆ ನೀಡಿದ್ದರು. 8 ಜನ ಆರೋಪಿಗಳ ವಿರುದ್ಧ ಸದಾಶಿವನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ರಿಕ್ಕಿ ರೈ ಹಾಗೂ ಶ್ರೀನಿವಾಸ್ ನಾಯ್ಡು ಇಬ್ಬರೂ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು. ಮುತ್ತಪ್ಪ ರೈ ನಿಧನದ ನಂತರ ರೈ ಗ್ರೂಪ್‌ನಿಂದ ಶ್ರೀನಿವಾಸ್ ನಾಯ್ಡು ಹೊರಬಂದಿದ್ದರು. ಇದರಿಂದಾಗಿ ರಿಕ್ಕಿ ರೈಗೆ ಶ್ರೀನಿವಾಸ್ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ನಾಯ್ಡು ಬಳಸುತ್ತಿದ್ದ ಕಪ್ಪು ಬಣ್ಣದ ರೇಂಜ್ ರೋವರ್ ಕಾರನ್ನು ನೋಡಿದ ರಿಕ್ಕಿ ರೈ ಘಟನೆಗೂ ಮೂರು ತಿಂಗಳು ಮೊದಲು ಶ್ರೀನಿವಾಸ್ ನಾಯ್ಡುಗೆ 'ಈ ಕಾರಿನಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ನೋಡುತ್ತೇನೆ. ಈ ಕಾರನ್ನ ಸುಟ್ಟು ಬೂದಿ ಮಾಡುತ್ತೇನೆ' ಎಂದಿದ್ದ ಎಂಬ ಆರೋಪ ಕೇಳಿಬಂದಿತ್ತು.
ಕಾರಿಗೆ ಬೆಂಕಿ ಹಚ್ಚುವ ಸಂಚು ಮಾಡಿ ಮೊದಲಿಗೆ ಶ್ರೀನಿವಾಸ್ ನಾಯ್ಡು ಸ್ನೇಹಿತ ಸುಪ್ರೀತ್ ಮೇಲೆ ಹಲ್ಲೆ ನಡೆಸಿ ಬಳಿಕ ಶ್ರೀನಿವಾಸ್ ನಾಯ್ಡು ಫ್ಲ್ಯಾಟ್‌ಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಆದರೆ ಆ ಸಂಚು ವಿಫಲವಾದಾಗ ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬುಲೆಟ್ ಮತ್ತು ಕಾರಿನಿಂದ ಪೆಟ್ರೋಲ್ ತೆಗೆದುಕೊಂಡು ಆರೋಪಿಗಳು ರೇಂಜ್ ರೋವರ್ ಕಾರಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಆರೋಪಿಸಿದ್ದರು.
"ಶ್ರೀನಿವಾಸ್ ನಾಯ್ಡು ಒಬ್ಬ ಮಾದಕ ವ್ಯಸನಿ. ಅವನು ಏನು ಮಾತನಾಡುತ್ತಾನೆ, ಏನು ಮಾಡುತ್ತಾನೆ ಎಂಬುದು ಯಾರಿಗೂ ಗೊತ್ತಿಲ್ಲ. ನಿನ್ನೆ ಊಟಕ್ಕೆಂದು ರಿಕ್ಕಿ ಹೋಗಿದ್ದಾಗ ಆತನೇ, ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದಾನೆ. ಜೊತೆಗಿದ್ದವರ ಸಹಾಯದಿಂದ ರಿಕ್ಕಿ ಬಚಾವಾಗಿದ್ದಾರೆ. ಆತ ಮುತ್ತಪ್ಪ ರೈ ಹೆಸರಿನಿಂದ ಪಬ್ಲಿಸಿಟಿ ಪಡೆಯುವ ಯತ್ನ ಮಾಡುತ್ತಿದ್ದಾನೆ" ಎಂದು ಘಟನೆಯ ಸಂದರ್ಭದಲ್ಲಿದ್ದ ರಿಕ್ಕಿ ರೈ ಸ್ನೇಹಿತರೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂದು ಸಿಸಿಬಿ ವಿಚಾರಣೆಗೆ ಹಾಜರಾಗ್ತಾರಾ ರಿಕ್ಕಿ ರೈ?