ಬೆಂಗಳೂರು: ಕೇಂದ್ರ ಸರ್ಕಾರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಐದು ಕೆಜಿ ಅಕ್ಕಿ ಕೊಟ್ಟಿದ್ದು, ನೀವು ಮೂರು ಕೆಜಿ ಕೊಡುತ್ತಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಸಿಎಂ ಉತ್ತರ ವೇಳೆ ಮಾತನಾಡಿದ ಅವರು, ಅಕ್ಕಿ ಕೇಳಲ್ಲಿಕ್ಕೆ ಕೇಂದ್ರ ಸರ್ಕಾರದ ಜೊತೆ ಮಾತನಾಡದೇ ಡೆಪ್ಯುಟಿ ಮ್ಯಾನೇಜರ್ ಹತ್ತಿರ ಹೋಗಿ ಕೇಳಿದರೆ ಅವರಿಗೆ ಅಕ್ಕಿ ಕೊಡುವ ಅಧಿಕಾರ ಇದೆಯಾ?. ಎಫ್ ಸಿಐ ಕೇಂದ್ರ ಸರ್ಕಾರದ ಏಜೆನ್ಸಿ, ಐದು ವರ್ಷ ಅಧಿಕಾರ ನಡೆಸಿದ್ದಾರೆ ಯಾರೊಂದಿಗೆ ಮಾತನಾಡಬೇಕು ಅನ್ನುವ ಸಾಮಾನ್ಯ ಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿ ಮುಖ್ಯಮಂತ್ರಿಗಳ ಉತ್ತರ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ನೀವು ಬಡವರಿಗೆ ಅಕ್ಕಿ ಕೊಡಲಿಲ್ಲ: ಬಿಜೆಪಿ ಸಭಾತ್ಯಾಗದ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ನೀವು ಬಡವರಿಗೆ ಅಕ್ಕಿ ಕೊಡ್ಲಿಲ್ಲ. ದ್ರೋಹ ನಿಮ್ದು, ಬಿಜೆಪಿ ಬಡವರ ವಿರೋಧಿಯಾಗಿದೆ. ಎಫ್‌ಸಿಐ ನಮಗೆ ಅಕ್ಕಿ ಕೊಡಲಿಲ್ಲ. ಅಕ್ಕಿ ಇಟ್ಕೊಂಡು ಕೊಡಲೇ ಇಲ್ಲ. ಇತ್ತೀಚೆಗೆ ಎಫ್‌ಸಿಐ ಅಕ್ಕಿ ಖರೀದಿಗೆ ಹರಾಜು ಕರೆದಿತ್ತು. ಆದರೆ, ಯಾರೂ ಕೂಡಾ ಹರಾಜಿನಲ್ಲಿ ಭಾಗವಹಿಸಲಿಲ್ಲ. ನೋಡಿ ಹೇಗಿದೆ, ನಾವು ಅಕ್ಕಿ ಕೇಳಿದ್ರೆ ಇಲ್ಲ ಅಂದ್ರು. ಅವರೇ ಓಪನ್ ಮಾರ್ಕೆಟ್ ನಲ್ಲಿ ಮಾರಲು ಹೋದಾಗ ಕೊಳ್ಳಲು ಯಾರೂ ಬರಲಿಲ್ಲ ಎಂದು ವ್ಯಂಗ್ಯವಾಗಿ ಕುಟುಕಿದರು.
ಸಿಎಂ ಉತ್ತರದ ವೇಳೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ನಾಚಿಕೆ ಇಲ್ವಾ, ಅಕ್ಕಿ ಘೋಷಣೆ ನೀವು ಮಾಡಿ ಬಿಜೆಪಿ ಅವರಿಂದ ಕೇಳುತ್ತಿದ್ದೀರಿ. ಮರ್ಯಾದೆ ಇಲ್ಲದ ಸರ್ಕಾರ. ಅಕ್ಕಿ ಕೊಡಲು ತಾಕತ್ ಇಲ್ಲದ ಸರ್ಕಾರ, ಈ ವೇಳೆ ಐದು ಕೆಜಿ ಅಕ್ಕಿಯಲ್ಲಿ ಮೂರು ಕೆಜಿ ಮಾತ್ರ ಕೊಟ್ಟಿದೀರಿ ಅಂತ ಬೊಮ್ಮಾಯಿ ಆರೋಪಿಸಿದರು.
ಇದಕ್ಕೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ, ಮೂರು ಕೆಜಿ ಅಕ್ಕಿ ಕೊಡ್ತಿರೋರು ನೀವು. ಕೇಂದ್ರ ಕೊಡ್ತಿರೋ ಅಕ್ಕಿಯಲ್ಲಿ ಕಡಿತ ಆಗಿರೋದು. ನಿಮಗೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಮಿಸ್ಟರ್ ಯಡಿಯೂರಪ್ಪ ನವರೇ. ನೀವು 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಕಡಿಮೆ ಮಾಡಿದವರು. ನೀವು ನಮಗೆ ಪಾಠ ಹೇಳಿಕೊಡಬೇಕಾ?. ಇವರ ವೀರಾವೇಷದ ಭಾಷಣ ಬೇರೆ. ಒಂದು ಕಾಳು ಕಡಿಮೆಯಾದರೂ ಸುಮ್ಮನೆ ಇರಲ್ಲ ಅಂತಾ ಭಾಷಣ ಮಾಡ್ತಾರೆ. ರಾಜ್ಯ ದಿವಾಳಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ನಿಜವಾಗಿಯೂ ಈ ರಾಜ್ಯ ದಿವಾಳಿಯಾಗಿದ್ರೆ ಅದು ಬಿಜೆಪಿಯವರಿಂದ. ನಾನು ಕುಮಾರಸ್ವಾಮಿಯವರಿಂದ ಇದನ್ನು ನಿರೀಕ್ಷೆ ಮಾಡಿದ್ದೆ. ರಾಜ್ಯ ಸರ್ಕಾರಕ್ಕೆ ಟ್ಯಾಕ್ಸ್ ಕೊಡೋದ್ರಲ್ಲಿ ಇವರು ಅನ್ಯಾಯ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಅಕ್ಕಿ ಕೊಡಲು ನಾವು ಬದ್ಧರಾಗಿದ್ದೇವೆ: ಒಂದಂತೂ ಸ್ಪಷ್ಟ ಆಯ್ತು, ಬಿಜೆಪಿಯವರು ಅನ್ನಭಾಗ್ಯದ ವಿರುದ್ಧ ಇದ್ದಾರೆ. ನಮಗೆ ಅಕ್ಕಿ ಕೊಡಲು ಅವಕಾಶ ಇದ್ರೂ ಕೊಡ್ಲಿಲ್ಲ. ಖಾಸಗಿಯವ್ರಿಗೆ ಮೊಲಾಸಿಸ್ ಮಾಡಲು ಅಕ್ಕಿ ಕೊಡ್ತಿದೆ. ಇದು ಬಡವರ ವಿರೋಧಿ ಬಿಜೆಪಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ನಾವು ಬಡವರ ಹಸಿವು ನೀಗಿಸಲು ಯೋಜನೆ ಕೈಗೊಂಡಿರೋದು. ನಮ್ಮ ಆರೋಪ ಕೇಳಲಾಗದೇ ಎದ್ದು ಹೋಗಿದ್ದಾರೆ. ನಾವು ಏಳು ಕೆಜಿ ಅಕ್ಕಿ ಕೊಡ್ತಿದ್ವಿ. ಬಿಜೆಪಿಯವರು ಏಳು ಕೆಜಿ ಬದಲಿಗೆ ಐದಕ್ಕೆ ಇಳಿಸಿದ್ರು. ಇದನ್ನು ಬಡವರು ಕೇಳ್ತಿದ್ರು. ಅದಕ್ಕೆ ನಾವು ಹತ್ತು ಕೆಜಿ ಕೊಡುವುದಾಗಿ ಯೋಜನೆ ಘೋಷಣೆ ಮಾಡಿದೆವು. ಇವರು ಅಕ್ಕಿ ಕೊಡಲಿ ಬಿಡಲಿ ನಾವು ಅಕ್ಕಿ ಕೊಡಲು ಬದ್ಧರಾಗಿದ್ದೇವೆ. ಬಡವರಿಗೆ ಅಕ್ಕಿ ಕೊಡಲು ಅವರಿಗೂ ಅವಕಾಶ ಕೊಟ್ಟೆವು. ಆದ್ರೆ ಅವ್ರು ಕೊಡಲಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರಿಗೆ ಅಕ್ಕಿ ಕೊಡಲು ಬದ್ಧ ಇದೆ. ನಾವು ಅಕ್ಕಿ ಕೊಡಲು ಮುಂದಾಗಿರೋದು ಬಿಜೆಪಿಗೆ ಅಸೂಯೆ ತರಿಸಿದೆ ಎಂದು ತಿರುಗೇಟು ನೀಡಿದರು.
ಇದನ್ನೂಓದಿ:ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಸದ್ಯದಲ್ಲೇ ನಿರ್ಧಾರ: ಉನ್ನತ ಶಿಕ್ಷಣ ಸಚಿವ ಸುಧಾಕರ್