ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಮಾಡಿ ಅಧಿಸೂಚನೆ ಪ್ರಕಟಿಸಲಾಗಿದ್ದು, ಹಣಕಾಸು ಇಲಾಖೆ ಶಿಫಾರಸಿನಂತೆ ಉಳಿದವರಿಗೂ ವೇತನ ಪರಿಷ್ಕರಣೆಯನ್ನು ಬೇರೆ ಸುತ್ತೋಲೆ ಮೂಲಕ ಪ್ರಕಟಿಸಲಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಪಟ್ಟಿಯಲ್ಲಿ ಕೈ ಬಿಟ್ಟು ಹೋಗಿರುವ ಎಸ್ಐ, ಎಸಿಪಿ ದರ್ಜೆಯ ಅಧಿಕಾರಿಗಳು, ಅಗ್ನಿಶಾಮಕರು ಮತ್ತು ಬಂಧಿಖಾನೆ ಅಧಿಕಾರಿಗಳಿಗೂ ಸಹ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಮತ್ತೊಂದು ಸುತ್ತೋಲೆ ಹೊರಡಿಸಿ ವೇತನ ಪರಿಷ್ಕರಣೆ ಮಾಡಲಾಗುತ್ತದೆ ಎಂದರು.
ಜಿಎಸ್ಟಿ ಕುರಿತಂತೆ ಸೆ. 20ರಂದು ಪಣಜಿಯಲ್ಲಿ ಜಿಎಸ್ಟಿ ಕೌನ್ಸಿಲ್ ಮೀಟಿಂಗ್ ಇದೆ. ಅದರಲ್ಲಿ ನಾನು ಭಾಗವಹಿಸಿ, ರಾಜ್ಯದ ನಿಲುವು ಪ್ರಕಟಿಸುತ್ತೇನೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಬೆಂಗಳೂರಿನಲ್ಲಿ ಸಭೆ ಇದೆ. ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ನೇತೃತ್ವದಲ್ಲಿ ಸಭೆ ನಡೆಯುತ್ತದೆ ಎಂದರು. ಇಂದು ನೆರೆಪೀಡಿತ ಪ್ರದೇಶಗಳ ಶಾಸಕರ ಸಭೆಯನ್ನು ಸಿಎಂ ನಡೆಸುತ್ತಿದ್ದಾರೆ. ಶಾಸಕರ ಅಹವಾಲು ಆಲಿಸಿ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದರು.