ಬೆಂಗಳೂರು/ಆನೇಕಲ್: ಯಾವುದೇ ಪಕ್ಷವಿರಲಿ, ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಯುಂಟು ಮಾಡಬಾರದು. ಅದು ಜನರ ಹಣ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ಕೈಗೆತ್ತಿಕೊಂಡ ಕೆಆರ್ಡಿಸಿಎಲ್ (ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ) ಬಿಡದಿಯಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಯೋಜನೆಗೆ ಸಂಸದ ಡಿ.ಕೆ. ಸುರೇಶ್ ಚಾಲನೆ ನೀಡಿದ್ದರು. ಕಳೆದ ಆರು ತಿಂಗಳಿಂದ ಇಂತಹ ಬೃಹತ್ ಯೋಜನೆಗೆ ಅನುದಾನ ಪಡೆದು ಗುತ್ತಿಗೆದಾರರು ಆರು ತಿಂಗಳಿಂದ ತಿಣುಕಾಡಿದರೂ ಕಾಮಗಾರಿ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಗಮನಿಸಿದ ಸಂಸದ ಡಿ.ಕೆ. ಸುರೇಶ್ ಅಧಿಕಾರಿಗಳನ್ನು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಎಲ್ಲೆಲ್ಲಿ ರಸ್ತೆ ಹಾದು ಹೋಗುತ್ತದೆಯೋ ಅಲ್ಲಲ್ಲಿ ಸಮಸ್ಯೆಗಳು ತಲೆದೋರಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆಯೇ ಮೂಲ ಕಾರಣ ಎಂದು ಮುಂದಿನ ದಿನಗಳಲ್ಲಿ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಬಗೆಹರಿಸಿ ಜನರಿಗೆ ರಸ್ತೆಯ ಸೇವೆ ಸಿಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆನೇಕಲ್ ಶಾಸಕ ಬಿ. ಶಿವಣ್ಣ ಮಾತನಾಡಿ ಬಿಜೆಪಿ ಸರ್ಕಾರ ಹಿಂದಿನ ಯೋಜನೆಗಳಿಗೆ ಮುಡುಪಾಗಿಟ್ಟ ಯೋಜನೆಗಳ ಹಣ ಮೊಟಕುಗೊಳಿಸಿ ಬಹಳಷ್ಟು ಯೋಜನೆಗಳನ್ನು ಕಡೆಗಣಿಸಿದ್ದಾರೆ. ಯಾವುದೇ ಸರ್ಕಾರವಾಗಲಿ, ಪಕ್ಷವಾಗಲಿ ಜನರ ತೆರಿಗೆ ಹಣದ ಯೋಜನೆಗಳನ್ನು ಜನರಿಗೆ ಮರಳಿಸುವಲ್ಲಿ ರಾಜಕಾರಣ ಮಾಡಬಾರದು ಎಂದರು.