ಬೆಂಗಳೂರು : ರಾಜ್ಯದ ರೇಷ್ಮೆ ಮಾರುಕಟ್ಟೆಯಲ್ಲಿ ತಂದಿರುವ ಬದಲಾವಣೆಗೆ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ಹಾಗೂ ಅವ್ಯವಹಾರ ತಡೆಗಟ್ಟಲು ಇ - ಪೇಮೆಂಟ್ ಜಾರಿಗೆ ತಂದಿರುವುದು ಉತ್ತಮ ಕಾರ್ಯ, ಇದು ದೇಶಕ್ಕೇ ಮಾದರಿಯಾಗಿದೆ. ರೇಷ್ಮೆ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.
ವಿಕಾಸಸೌಧದಲ್ಲಿ ಇಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಕಾರ್ಯ ಚಟುವಟಿಕೆ ಹಾಗೂ ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ರೇಷ್ಮೆ ಇಲಾಖೆ ಕಾರ್ಯ ಚಟುವಟಿಕೆ ಕುರಿತ ಪ್ರಾತ್ಯಕ್ಷಿಕೆ ನೋಡಿ ಸಚಿವರು ಸಂತಸ ವ್ಯಕ್ತಪಡಿಸಿದರು. ಕಳೆದ 5 ವರ್ಷಗಳಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ 12 ಸಾವಿರಕ್ಕಿಂತ ಹೆಚ್ಚು ವೃದ್ಧಿಯಾಗಿದೆ. 2016-17ರಲ್ಲಿ 1.25 ಲಕ್ಷದಷ್ಟಿದ್ದ ರೇಷ್ಮೆ ರೈತರ ಸಂಖ್ಯೆ 2021ರ ವೇಳೆ 1.38 ಲಕ್ಷದಷ್ಟಾಗಿದೆ.
ಇ-ಪೇಮೆಂಟ್ ಜಾರಿ:
ರೇಷ್ಮೆ ಬೆಳೆಗಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಉತ್ತೇಜನ ನೀಡಿರುವ ಹಿನ್ನೆಲೆಯಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ರೈತರು ಹೆಚ್ವಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ರೇಷ್ಮೆ ಮಾರುಕಟ್ಟೆಯಲ್ಲಿ ಈ ಹಿಂದೆ ನಗದು ವ್ಯವಹಾರ ನಡೆಯುತ್ತಿತ್ತು. ಇದರಿಂದ ರೈತರು ವಿವಿಧ ಕಾರಣಗಳಿಂದ ನಷ್ಟ ಅನುಭವಿಸುವ ಸಾಧ್ಯತೆ ಇತ್ತು. ಈ ಕಾರಣಕ್ಕಾಗಿ ನೇರವಾಗಿ ರೇಷ್ಮೆ ಬೆಳೆಗಾರರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ವ್ಯವಸ್ಥೆ ಮಾಡುವುದಕ್ಕಾಗಿ ಇ - ಪೇಮೆಂಟ್ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ 41 ರೇಷ್ಮೆ ಮಾರುಕಟ್ಟೆಯಿದ್ದು, ಎಲ್ಲ ಕಡೆಗಳಲ್ಲಿ ಇದನ್ನು ಅಳವಡಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಯಾವುದೇ ರೇಷ್ಮೆ ಮಾರುಕಟ್ಟೆಗೆ ಅಗತ್ಯವಿರುವ ವ್ಯವಸ್ಥೆ ಇ-ಪೇಮೆಂಟ್ ಹಾಗೂ ಇ - ಟೆಂಡರ್ ಪದ್ಧತಿ ದೇಶಕ್ಕೇ ಮಾದರಿಯಾಗಿದೆ. ಎಲ್ಲ ಕಡೆಗಳಲ್ಲಿ ಇದು ಜಾರಿಗೆ ಬರಬೇಕಾಗಿದೆ. ನಮ್ಮ ರಾಜ್ಯದ ರೇಷ್ಮೆ ಮಾರುಕಟ್ಟೆಯಲ್ಲಿ ಜಾರಿಯಾಗಿರುವ ಈ ವ್ಯವಸ್ಥೆಯನ್ನು ಬೇರೆ ರಾಜ್ಯಗಳಿಗೂ ವಿಸ್ತರಣೆಯಾಗುವಂತಹುದು. ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ಇಚ್ಚಾಶಕ್ತಿ ಹಾಗೂ ಅವರ ಕಾರ್ಯ ಮೆಚ್ಚುವಂತದ್ದು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚೀನಾ ಮಾರುಕಟ್ಟೆಗೆ ಪೈಪೋಟಿ :
ಕರ್ನಾಟಕದ ರೇಷ್ಮೆಗೆ ದೇಶದಲ್ಲಿ ಉತ್ತಮ ಹೆಸರಿದೆ. ಬೇಡಿಕೆ ಸಹ ಇದೆ. ಗುಣಮಟ್ಟದ ರೇಷ್ಮೆ, ಗುಣಮಟ್ಟದ ಪ್ಯಾಕಿಂಗ್ ಮಾಡಿ ರಫ್ತು ಮಾಡಬೇಕು. ಈಗಲೂ ರೇಷ್ಮೆ ರಫ್ತಾಗುತ್ತಿದೆ. ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ರಫ್ತಾದರೆ ನಮ್ಮ ರಾಜ್ಯದ ರೇಷ್ಮೆಗೆ ಹೆಚ್ಚಿನ ಪ್ರಚಾರ ಸಿಗುತ್ತದೆ, ಮಾರುಕಟ್ಟೆ ವಿಸ್ತರಣೆಯಾಗುತ್ತದೆ, ರೈತರಿಗೆ ಉತ್ತಮ ಬೆಲೆಯೂ ಸಿಗುತ್ತದೆ. ಚೀನಾದ ಮಾರುಕಟ್ಟೆಗೆ ನಮ್ಮ ರಾಜ್ಯ ಪೈಪೋಟಿ ನೀಡಬೇಕು. ಚೀನಾಗೆ ಪರ್ಯಾಯವಾಗಿ ನಮ್ಮ ರಾಜ್ಯದ ರೇಷ್ಮೆ ಮಾರುಕಟ್ಟೆ ಬೆಳೆಯುವಂತಾಗಬೇಕು. ನಮ್ಮ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕ್ಲಸ್ಟರ್ ಸ್ಥಾಪಿಸಿ ರೈತ ಉತ್ಪನ್ನ ರಫ್ತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.
ರಾಜ್ಯದಲ್ಲಿನ ಫುಡ್ ಪಾರ್ಕ್ ಬಗ್ಗೆ ಕೇಂದ್ರ ಸಚಿವರ ಅಸಮಾಧಾನ :
ಫುಡ್ ಪಾರ್ಕ್ ನಿರ್ವಹಣೆ ಸರಿಯಾಗಿಲ್ಲ. ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸ್ಥಳೀಯ ರೈತ ಉತ್ಪನ್ನಗಳಿಗೆ ಅವಕಾಶ ನೀಡಬೇಕು. ಆದರೆ, ಫುಡ್ ಪಾರ್ಕ್ ಆ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸಚಿವ ಡಾ. ನಾರಾಯಣಗೌಡ ಅವರು ಕೇಂದ್ರ ಸಚಿವರಿಗೆ ವಿವರಿಸಿದರು. ವಿಷಯ ಅರಿತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫುಡ್ ಪಾರ್ಕ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶವೇ ಸ್ಥಳೀಯ ರೈತರಿಗೆ ಅನುಕೂಲವಾಗಬೇಕು ಎನ್ನುವುದು. ಆ ಕಾರಣಕ್ಕಾಗಿಯೇ ಫುಡ್ ಪಾರ್ಕ್ ನಿರ್ಮಿಸಿರುವುದು. ಈ ರೀತಿಯಲ್ಲಿ ನಡೆದುಕೊಂಡು ರೈತರಿಗೆ ಅನ್ಯಾಯ ಮಾಡಿದರೆ ಸಹಿಸುವುದಿಲ್ಲ. ಸ್ಥಳೀಯ ರೈತರಿಗೆ ಮೊದಲ ಆದ್ಯತೆ ನೀಡಬೇಕು. ಕೆಲಸದಲ್ಲಿ ಅಥವಾ ಕೃಷಿ ಉತ್ಪನ್ನದಲ್ಲಿ ಮೊದಲ ಅವಕಾಶ ಸ್ಥಳೀಯ ರೈತರಿಗೆ ಇರಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮೈಸೂರಿನಲ್ಲಿ ರೇಪ್ ಆದರೆ ನನ್ನನ್ನು ಯಾಕೆ ಕೇಳ್ತಿರಪ್ಪೋ: ಜಿ.ಎಂ. ಸಿದ್ದೇಶ್ವರ್