ಬೆಂಗಳೂರು: ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯುವ ಚುನಾವಣೆ ಇದಾಗಲಿದೆ. ರಾಷ್ಟ್ರದಲ್ಲಿ ಈಗಾಗಲೇ ಮೊಳೆ ಹೊಡೆದಾಗಿದೆ. ಈಗ ಕರ್ನಾಟಕದಲ್ಲಿ ಕೊನೆ ಮೊಳೆ ಹೊಡೆಯುವ ಕೆಲಸ ಆಗಲಿದೆ. ಇನ್ನು ಬಿಜೆಪಿಯನ್ನ ಕಟ್ಟಿಹಾಕುವ ಕೆಲಸ ಆಗಲ್ಲ. ಬಿಜೆಪಿ ಅಶ್ವಮೇಧ ಹೊರಟಿದೆ. ಕಾಂಗ್ರೆಸ್ ಕೈಯಲ್ಲಿ ನಮ್ಮ ಅಶ್ವಮೇಧ ಕುದುರೆ ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವೇ ಬರಲಿದೆ. ಡಬಲ್ ಇಂಜಿನ್ ಸರ್ಕಾರ ತರಲು ನಮ್ಮ ನಾಯಕರು ಸೂಚಿಸಿದ್ದಾರೆ. ಅದಕ್ಕಾಗಿಯೇ ಹಲವು ಕಾರ್ಯಕ್ರಮ ರೂಪಿಸಿದ್ದೇವೆ. ವಿಜಯ ಸಂಕಲ್ಪ ಯಾತ್ರೆಯನ್ನು ನಾಲ್ಕು ರಥದ ಮೂಲಕ ಮಾಡುತ್ತಿದ್ದೇವೆ ಎಂದರು.
ನನ್ನ ನೇತೃತ್ವದ ತಂಡದಲ್ಲಿ, ಅಶ್ವತ್ಥ ನಾರಾಯಣ್, ಗೋಪಾಲಯ್ಯ ಸೇರಿದಂತೆ ಹಲವರು ಇದ್ದಾರೆ. ಮಾರ್ಚ್ 3ರಂದು ಕೆಂಪೇಗೌಡರು ಹುಟ್ಟಿದ ಸಮಯದಲ್ಲಿ ಚನ್ನಕೇಶವ ದೇವಸ್ಥಾನದಿಂದ ನಮ್ಮ ರಥಯಾತ್ರೆ ಆರಂಭವಾಗಲಿದೆ. ದೇವನಹಳ್ಳಿ ಸರ್ಕಾರಿ ಕಾಲೇಜು ಆವರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಥಯಾತ್ರೆ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಸಾರ್ವಜನಿಕ ಸಮಾವೇಶ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಕ್ಷದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಒಟ್ಟು 17 ಸಾರ್ವಜನಿಕ ಸಭೆ ಮಾಡಲಿದ್ದೇವೆ.7 ಮೋರ್ಚಾಗಳ ಸಮಾವೇಶ ನಡೆಯಲಿದೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಸಮಾವೇಶ ಮಾಡಲು ಸೂಚಿಸಿದೆ. ನಮ್ಮ ರ‍್ಯಾಲಿಯಲ್ಲಿ ರೋಡ್ ಶೋ ನಡೆಯಲಿದೆ. ಎಲ್ಲಿ ಗೆಲ್ಲಬೇಕು ಅಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ಇರಲಿದೆ. ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದ ಮೂಲಕ ಸಾಗುವ ನಮ್ಮ ರಥಯಾತ್ರೆ, ದಾವಣಗೆರೆಯಲ್ಲಿ ಅಂತ್ಯವಾಗಲಿದೆ. ಮಾರ್ಚ್ 25ರಂದು ನಾಲ್ಕು ತಂಡ ಜೋಡಣೆಯಾಗಿ ಬೃಹತ್ ಸಮಾವೇಶ ಮಾಡಲಿದ್ದೇವೆ. ಆ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಪಾಂಚಜನ್ಯ ಯೋಜನೆ ರೂಪಿಸುವ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಆಡಳಿತ ತರುತ್ತೇವೆ. ನಾವು ಮಾಡಿದ ಎಲ್ಲ ಸರ್ವೆಯಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ದೊಡ್ಡ ಅಂತರದಲ್ಲಿ ನಮ್ಮ ಶಾಸಕರು ಬರಬೇಕು. ಆ ನಿಟ್ಟಿನಲ್ಲಿ ರಥಯಾತ್ರೆ ಮೊದಲ ಮೆಟ್ಟಿಲು ಆಗಲಿದೆ. ಕಾಂಗ್ರೆಸ್ ನಲ್ಲಿ ನಾಯಕತ್ವ ಕೊರತೆ ಇದೆ. ಪದೇ ಪದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ನಿಮ್ಮ ನಾಯಕರು ಯಾರು ಅಂದರೆ ಜೀರೋ ಅಂತಿದ್ದಾರೆ. ನಮ್ಮ ರಥಯಾತ್ರೆಗೆ ಯಡಿಯೂರಪ್ಪ , ಬೊಮ್ಮಾಯಿ ಅವರು ಸಾಧ್ಯವಾದ ಕಡೆ ಬರುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಇದ್ದಾರೆ. ಕೇಂದ್ರದಲ್ಲಿ ಮೋದಿ, ಅಮಿತ್ ಶಾ, ನಡ್ಡಾ ಇದ್ದಾರೆ. ಆದರೆ, ಕಾಂಗ್ರೆಸ್ ಗೆ ನಾಯಕತ್ವ ಕೊರತೆ ಇದೆ. ಮರಳುಗಾಡಿನಲ್ಲಿ ಓಯಾಸಿಸ್‌ನಲ್ಲಿ ನೀರು ಹುಡುಕುವಂತೆ ನಾಯಕರನ್ನ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.
ಎಕ್ಸ್ ಪ್ರೆಸ್ ವೇಗೆ ಮೋದಿ ಚಾಲನೆ : ಹಳೆ ಮೈಸೂರು ಭಾಗದಲ್ಲಿ ಬೆಂಗಳೂರು ಸೇರುತ್ತದೆ. ಬೆಂಗಳೂರಿನಲ್ಲಿ ನಾವೇ ಹೆಚ್ಚು ಇರೋದು. ಮೋದಿಯವರು ಎಕ್ಸ್ಪ್ರೆಸ್ ವೇ ರಸ್ತೆ ಉದ್ಘಾಟನೆಗೆ ಬರುತ್ತಾರೆ. ಯೋಗಿ ಆದಿತ್ಯನಾಥ್ ಅವರೂ ಕೂಡ ಬರುತ್ತಿದ್ದಾರೆ. ಅವರು ನಾಥ ಪರಂಪರೆಯವರು ಎಂದರು.
ಯಡಿಯೂರಪ್ಪ ರಾಜಕೀಯ ನಿವೃತ್ತಿ ಪಡೆದಿಲ್ಲ. ಅವರು ಅಧಿಕಾರದಲ್ಲಿ ಇಲ್ಲದೇ ಇದ್ದರೂ ಅವರು ಸಕ್ರಿಯ ರಾಜಕೀಯದಲ್ಲಿ ಇದ್ದಾರೆ. ಯಡಿಯೂರಪ್ಪ ನಮ್ಮ ನಾಯಕ. ಅದರಲ್ಲಿ ಎರಡನೇ ಪ್ರಶ್ನೆಯೆ ಇಲ್ಲ. ಕಾಂಗ್ರೆಸ್‌ಗೆ ಭಯ ಶುರುವಾಗಿದೆ. ಅದಕ್ಕಾಗಿಯೇ, ಯಡಿಯೂರಪ್ಪ ಮೇಲೆ ಸಿಂಪತಿ ತೋರುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನ ಜೈಲಿಗೆ ಹಾಕಿದ್ದು ಕಾಂಗ್ರೆಸ್. ಯುಪಿಎ ಸರ್ಕಾರ ಯಡಿಯೂರಪ್ಪ ಅವರನ್ನ ಜೈಲಿಗೆ ಹಾಕಿತ್ತು. ಯಡಿಯೂರಪ್ಪ ಜೈಲಿಗೆ ಹೋಗಲು ಕಾಂಗ್ರೆಸ್ನ ಯುಪಿಎ ಸರ್ಕಾರ ಕಾರಣ. ಜನಾರ್ದನ ರೆಡ್ಡಿ ಜೈಲಿಗೆ ಹಾಕಿದ್ದು ಕಾಂಗ್ರೆಸ್. ಈಗ ಸಿಂಪತಿ ತೋರಿಸ್ತಿರಾ ಕಾಂಗ್ರೆಸ್ ನಾಯಕರೇ?, ನಿಮಗೆ ಯಡಿಯೂರಪ್ಪ ಭಾಷಣ ಮಾಡಿದರೆ ಭಯ. ಹಾಗಾಗಿ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಮೇಲೆ ಸಿಂಪತಿ ತೋರುತ್ತಿದ್ದಾರೆ ಎಂದರು.
ವರದಿ ತರಿಸಿ ಸೂಕ್ತ ತೀರ್ಮಾನ: ಎನ್ಪಿಎಸ್ ಬಗ್ಗೆ ಚರ್ಚೆಯಾಗಿದೆ. ಸರ್ಕಾರಿ ನೌಕರರು ಎರಡನೇ ಬೇಡಿಕೆ ಇಟ್ಟಿದ್ದಾರೆ. ಐದು ರಾಜ್ಯಗಳಲ್ಲಿ ಒಪಿಎಸ್ ಮಾಡಿದ್ದಾರೆ. ಅದನ್ನ ಅಧ್ಯಯನ ಮಾಡಬೇಕಿದೆ. ಐದು ರಾಜ್ಯಗಳಲ್ಲಿ ಏನಾಗಿದೆ ವರದಿ ಕೊಡಿ ಅಂತ ಸೂಚಿಸಿದ್ದೇವೆ. ಅದರಂತೆ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಇನ್ನು ವೇತನ ಹೆಚ್ಚಳದ ವಿಚಾರಕ್ಕೆ ಬಂದರೆ ಪ್ರತೀ ಐದು ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕು.
ಸಿದ್ದರಾಮಯ್ಯ ಸರ್ಕಾರ ಕೂಡ ಚುನಾವಣಾ ಸಮಯದಲ್ಲಿ ವೇತನ ಹೆಚ್ಚಿಸಿತ್ತು. ನಿನ್ನೆ ಕೂಡ ಸಿಎಂ ಜೊತೆ ಭೇಟಿಯಾಗಿ ಮಾತನಾಡಲಾಗಿತ್ತು. ಈಗ ವೇತನ ಹೆಚ್ಚಳ ಮಾಡಲಾಗಿದೆ. ವಿಧಾನಸೌಧದಲ್ಲಿ ಆದೇಶ ಆಗಿದೆ. ಅಡಾಕ್ ಸಮಿತಿ ಪ್ರಕಾರ, ವೇತನ ಹೆಚ್ಚಳ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೌಕರರು ಪ್ರತಿಭಟನೆ ಮಾಡಿದ ಬಳಿಕ ಮಾಡಿದ್ದರು. ಆದರೆ, ನಾವು ಪ್ರತಿಭಟನೆಗೆ ಮೊದಲೇ ಆದೇಶ ಮಾಡಿದ್ದೇವೆ. ನಿನ್ನೆ ರಾತ್ರಿಯೇ ಸಭೆ ಮಾಡಿರೋದ್ರಿಂದ ರಾಜ್ಯಪಾಲರ ಆದೇಶದ ಮೇಲೆ ಈಗ ಆದೇಶ ಆಗಿದೆ ಎಂದರು.
ಸಿಎಂ ಸ್ಥಾನ ಹಣೆಯಲ್ಲಿ ಬರೆದಿರಬೇಕು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಆರ್ ಅಶೋಕ್, ಅದರ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆ. ನನ್ನ ಯಾಕೆ ಒಕ್ಕಲಿಗ ಸಮುದಾಯಕ್ಕೆ ಸೀಮಿತ ಮಾಡುತ್ತೀರಿ. ನಾನು ಹುಟ್ಟಿದ್ದು ಒಕ್ಕಲಿಗ ಸಮುದಾಯದಲ್ಲಿ. ಆದರೆ, ನಾನು ಎಲ್ಲ ಜಾತಿಗಳನ್ನು ಇಷ್ಟಪಡುವಂತವನು. ನಾನು ರಾಜ್ಯಾದ್ಯಂತ ಓಡಾಡ್ತಿದ್ದೇನೆ. ಬೆಂಗಳೂರಿಗೆ ಸೀಮಿತ ಮಾಡಬೇಡಿ, ನಾನು ಏನು ಡಿ ಕೆ ಶಿವಕುಮಾರ್ ತರಹ ಹೇಳಲ್ಲ. ಸಿಎಂ ಆಗೋದು ಹಣೆಯಲ್ಲಿ ಬರೆದಿರಬೇಕು ಎಂದರು.
ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ತಾವೇ ವಹಿಸಿಕೊಳ್ಳಲು ಮುಂದಾದ್ರಾ ಸಿಎಂ..? ಮಂಡ್ಯ ಜಿಲ್ಲೆಯ ಉಸ್ತುವಾರಿ ಯಾರು ಎಂಬ ಪ್ರಶ್ನೆಗೆ ಸಿಎಂ ಇದ್ದಾರೆ. ಬೆಂಗಳೂರು, ಮಂಡ್ಯಕ್ಕೆ ಮುಖ್ಯಮಂತ್ರಿಗಳೇ ಇದ್ದಾರೆ ಎಂದು ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಯಾರು ವಹಿಸಿಕೊಳ್ಳದೇ ಕೊನೆಗೂ ಸ್ವತಃ ಸಿಎಂ ತಾವೇ ಮಂಡ್ಯ ಉಸ್ತುವಾರಿ ತೆಗೆದುಕೊಳ್ಳುತ್ತಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಹಲವು ಸಚಿವರು ಹಿಂದೇಟು ಹಾಕಿದ್ದರು. ಹಾಗಾಗಿ ಸಿಎಂ ಉಸ್ತುವಾರಿಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ.. ಶೇ.17ರಷ್ಟು ವೇತನ ಹೆಚ್ಚಳ, ನಿವೃತ್ತ ನೌಕರರಿಗೂ ವೇತನ ಪರಿಷ್ಕರಣೆ ಅನ್ವಯ