ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದರಿಂದ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯುವ ಕುರಿತು ಏಪ್ರಿಲ್ 1 ರಂದು ಕೇಂದ್ರ ಗೃಹ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದೆ. ರಾಜ್ಯ ಸರ್ಕಾರವೂ ರಾಜ್ಯದಲ್ಲಿ ತಿದ್ದುಪಡಿ ಮಾಡಿರುವ ಎಪಿಎಂಸಿ ಕಾನೂನುಅನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಪ್ರಧಾನಿಯವರು ಎಪಿಎಂಸಿ ಬಲಪಡಿಸಲು ಒಳ್ಳೆಯ ಕಾನೂನು ತಂದಿದ್ದರು. ದುರ್ದೈವದಿಂದ ಆ ಕಾನೂನು ವಾಪಸ್ ಪಡೆಯಬೇಕಾಯಿತು. ರಾಜ್ಯದಲ್ಲಿಯೂ ಎಪಿಎಂಸಿ ಕಾನೂನನ್ನು ವಾಪಸ್ ಪಡೆಯಬೇಕು ಎಂದರು.
ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದೆಲ್ಲವನ್ನು ರೈತರು ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ತೆರಿಗೆ ಮಹಾರಾಷ್ಟ್ರಕ್ಕೆ ಹೋಗುತ್ತಿದೆ. ನಮ್ಮ ರಾಜ್ಯದ ಎಪಿಎಂಸಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸದನದ ಗಮನ ಸೆಳೆದರು. ಅವರ ಮನವಿಗೆ ಉತ್ತರಿಸಿದ ಸಚಿವ ಸೋಮಶೇಖರ್, ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಎಂಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವ ಕುರಿತು ಸಿಎಂ ಚರ್ಚಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಗುತ್ತಿಗೆದಾರರು ಪರ್ಸಂಟೇಜ್ ಕೊಡುವುದು ನಿಲ್ಲಿಸಿ, ಎಲ್ಲವೂ ಸರಿ ಹೋಗುತ್ತದೆ: ಹೆಚ್‌ಡಿಕೆ