ಬೆಂಗಳೂರು: ನಗರದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ನಿವೃತ್ತ ಸಬ್ಇನ್ಸ್ಪೆಕ್ಟರ್ ಸಾವನ್ನಪ್ಪಿದ್ದಾರೆ.
ಕೋರಮಂಗಲ ನಿವಾಸಿಯಾಗಿರುವ ಈ ಪೊಲೀಸ್ ಅಧಿಕಾರಿ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಹೆಬ್ಬಾಳದ ವೈದ್ಯರೊಬ್ಬರ ಬಳಿ ಚಿಕಿತ್ಸೆಗೆ ತೆರಳಿದ್ದಾರೆ. ಆಗ ತೀವ್ರ ಜ್ವರವಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು.
ಬಳಿಕ ಅವರು ವಿಲ್ಸನ್ ಗಾರ್ಡನ್ ಅಗಡಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಅಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ ಬಳಿಕವೇ ಚಿಕಿತ್ಸೆ ನೀಡಲಾಗುವುದು ಎಂದು ಗಂಟಲ ದ್ರವವನ್ನು ಪಡೆದು 4,500 ಹಣ ಪಾವತಿಸಿಕೊಂಡಿದ್ದಾರೆ. ನಂತರ ವೆಂಟಿಲೇಟರ್ ಇಲ್ಲವೆಂದು ಹೇಳಿ ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ಹಾಗೆಯೇ ಕಳುಹಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ತದನಂತರ ವೊಕಾರ್ಡ್ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲು ನಿರಾಕರಿಸಲಾಗಿದೆ. ನಂತರ ರಾಜೀವ್ ಗಾಂಧಿ ಆಸ್ಪತ್ರೆ ಮುಂಭಾಗ ಮೂರು ಗಂಟೆಗಳ ಕಾಲ ಕಾದಿದ್ದಾರೆ. ಈ ವೇಳೆ ಬೆಡ್ ಖಾಲಿ ಇಲ್ಲವೆಂದು ಅಲ್ಲಿಯೂ ಚಿಕಿತ್ಸೆ ನೀಡಲೇ ಇಲ್ಲ ಎಂದು ತಿಳಿದುಬಂದಿದೆ.
ಹೀಗೆ ಸಾಕಷ್ಟು ಅಲೆದು ಸುಸ್ತಾಗಿ ಕೊನೆಗೆ ದಿಕ್ಕು ತೋಚದೆ ಕಂಗಾಲಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲೂ ಬೆಡ್ ಇಲ್ಲವೆಂದು ಚಿಕಿತ್ಸೆ ನೀಡದೆ ಕೊನೆಗೆ ಮೂರು ದಿನಗಳಿಂದ ಅಲೆದರೂ ಅತ್ತ ಕೋವಿಡ್ ವರದಿಯೂ ಕೂಡ ಕೈಸೇರದೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ಸಿಗದೆ ಹತಾಶರಾಗಿ ಮನೆಗೆ ಮರಳಿದ್ದರು.
ಬಳಿಕ ನಿನ್ನೆ ಮಡಿವಾಳದಲ್ಲಿನ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರು ನಗರದ ಹಲವಾರು ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.