ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ನಿವೃತ್ತ ಡಿವೈಎಸ್ಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯನಗರದ ಎಂ.ಸಿ. ಲೇಔಟ್ ಮನೆಯೊಂದರಲ್ಲಿ ವಾಸವಾಗಿದ್ದ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಮನೆಯೊಂದರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹನುಮಂತಪ್ಪ, ನಾಳೆಯಿಂದ ಕಿಮೋಥೆರಪಿ ಚಿಕಿತ್ಸೆಗೆ ಒಳಪಡಬೇಕಿತ್ತು. ಅದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಓದಿ: ಆರೋಗ್ಯ ಸಚಿವ, ಎಸ್ಪಿ, ಪತ್ರಕರ್ತರಿಂದ ಕಿರುಕುಳ ಆರೋಪ : ಪತ್ರಕರ್ತ ಆತ್ಮಹತ್ಯೆಗೆ ಯತ್ನ
ಮಾಗಡಿರಸ್ತೆ, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ವಿಜಯನಗರ ಉಪವಿಭಾಗ ಹಾಗೂ ಯಶವಂತಪುರ ಉಪವಿಭಾಗದ ಎಸಿಪಿಯಾಗಿ ಸೇವೆ ಸಲ್ಲಿಸಿದ್ದರು.
ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಹನುಮಂತಪ್ಪ, ಅದೇ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದಿದ್ದರು. ರಾಷ್ಟ್ರಪತಿಗಳ ಪದಕ ಗೌರವಕ್ಕೂ ಭಾಜನರಾಗಿದ್ದರು. 2013ರಲ್ಲಿ ನಿವೃತ್ತಿ ಹೊಂದಿದ್ದರು. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.