ಬೆಂಗಳೂರು: ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ/ಎಸ್ಪಿ ಒಬಿಸಿಯವರನ್ನು ಹೊರತುಪಡಿಸಿ ವಾರ್ಷಿಕ 8 ಲಕ್ಷ ವರಮಾನ ಇರುವ ಮೇಲ್ಜಾತಿಯವರಿಗೆ ನೀಡಿರುವ ಇಡಬ್ಲ್ಯೂಎಸ್ ಮೀಸಲಾತಿ ವಿರೋಧಿಸುವ ಕುರಿತು ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ದಲಿತರ ಸಾಂಸ್ಕೃತಿಕ ವೇದಿಕೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಅಲ್ಲದೇ, ಬಹುತ್ವದ ಸಂಸ್ಕೃತಿಯ ಮೇಲೆ ವೈದಿಕಶಾಹಿಯ ಏಕ ಸಂಸ್ಕೃತಿಯನ್ನು ಹೇರುವಂತಹ ದಬ್ಬಾಳಿಕೆಯ ನೀತಿಯನ್ನು ಖಂಡಿಸುವುದು. ವೈವಿಧ್ಯಮಯ, ಸೌಹಾರ್ದಯುತ, ಸಾಮರಸ್ಯದ ಬಹು ಹಕ್ಕಾದ ಸಾಂಸ್ಕೃತಿಕ ಅಸ್ಮಿತೆ ಉಳಿಸಿಕೊಳ್ಳುವುದು. ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು, ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಕೋಮುವಾದಿ ದೌರ್ಜನ್ಯಗಳನ್ನು ವಿರೋಧಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಪ್ರಮುಖ ನಿರ್ಣಯಗಳು: ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಕೋಮುವಾದಿ ದೌರ್ಜನ್ಯಗಳನ್ನು ವಿರೋಧಿಸುವುದು. ಬ್ರಾಹ್ಮಣ ಮತ್ತು ಬಂಡವಾಳಶಾಹಿಯ ಸಾಧನದಂತೆ ವರ್ತಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸುವುದು. ಚಾತುರ್ವರ್ಣ ಮತ್ತು ಜಾತೀಯತೆ ತಾರತಮ್ಯಗಳನ್ನು ಎತ್ತಿ ಹಿಡಿಯುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಬಲವಾಗಿ ವಿರೋಧಿಸುವ ಬಗ್ಗೆ ಪ್ರಮುಖವಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ/ವರ್ಗಗಳಲ್ಲೂ, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸುವುದು. ಪರಿಶಿಷ್ಟ ಜಾತಿ/ವರ್ಗಗಳಿಗೆ ಎಸ್ಸಿಪಿ, ಟಿಎಸ್ಪಿ ಕಾಯಿದೆ ಅನುಗುಣವಾಗಿ ರಾಜ್ಯ ಬಜೆಟ್ ನ ಶೇ.24.10ರಷ್ಟು ಅನುದಾನವನ್ನು ಮೀಸಲಿಟ್ಟು 'ಏಕ ಗವಾಕ್ಷಿ’ ಯೋಜನೆಯಲ್ಲಿ ಅನುಷ್ಠಾನಗೊಳಿಸುವುದು. ದಲಿತರನ್ನು ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದು. ಆ ಮೂಲಕ ಅನುದಾನ ದುರ್ಬಳಕೆ ನಿಲ್ಲಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ.
ಖಾಸಗಿ ಕ್ಷೇತ್ರದಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ಜಾರಿ ಮಾಡುವುದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡುವುದು. ಹೊರಗುತ್ತಿಗೆ ನೇಮಕಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
'ಗೋ ಹತ್ಯೆ ನಿಷೇಧ ಕಾಯಿದೆ' ಮತ್ತು 'ಮತಾಂತರ ನಿಷೇಧ ಕಾಯಿದೆ' ಗಳನ್ನು, ಈ ಕೂಡಲೇ ರದ್ದುಗೊಳಿಸಬೇಕು. ಚಾತುರ್ವರ್ಣ ಪದ್ಧತಿಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡಲೇ ರದ್ದುಗೊಳಿಸಬೇಕು, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸುವ ಯೋಚನೆಯನ್ನು ಪುನರಾರಂಭಿಸಬೇಕು. ಎಸ್ಸಿ/ಎಸ್ಟಿ ಮೀಸಲಾತಿಗೆ ನಿಗದಿಪಡಿಸುರುವ ವಾರ್ಷಿಕ ಆದಾಯ ಮಿತಿಯನ್ನು 10 ಲಕ್ಷ ಕ್ಕೆ ಏರಿಸುವುದು. ಮಲ ಹೊರುವ ಪದ್ದತಿ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಆಗ್ರಹಿಸುವ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ದಲಿತ ವರ್ಗ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು: ನ್ಯಾ.ನಾಗಮೋಹನ್ ದಾಸ್