ಬೆಂಗಳೂರು: ಹೈಕಮಾಂಡ್ ಆದೇಶ ಪಾಲನೆ ಮಾಡುವುದಾಗಿ ರಾಜೀನಾಮೆ ಸುಳಿವು ನೀಡುತ್ತಿದ್ದಂತೆ ಯಡಿಯೂರಪ್ಪ ನಿವಾಸ ರಾಜಕೀಯ ಚಟುವಟಿಕೆಯ ಕೇಂದ್ರವಾಗಿದೆ. ಸಚಿವರು ಒಬ್ಬೊಬ್ಬರಾಗಿ ಸಿಎಂ ನಿವಾಸದತ್ತ ಹೆಜ್ಜೆ ಇಡುತ್ತಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಕೇರಳಿಸುತ್ತಿದೆ.
ಕೋದಂಡರಾಮ ದೇವಾಲಯದಿಂದ ನಿವಾಸಕ್ಕೆ ವಾಪಸ್ ಆಗುತ್ತಿದ್ದಂತೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿದರು. ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇಂದಿನ ಹೇಳಿಕೆ ಹಿಂದಿರುವ ಗೂಡಾರ್ಥದ ಕುರಿತು ಸಮಾಲೋಚನೆ ನಡೆಸಿದರು.
ನಂತರ ಮಿತ್ರಮಂಡಳಿ ತಂಡದ ಸಚಿವರಾದ ಎಸ್.ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜ ಸಿಎಂ ನಿವಾಸಕ್ಕೆ ಆಗಮಿಸಿದರು. ನಾಯಕತ್ವ ಬದಲಾವಣೆ ಆದಲ್ಲಿ ತಮ್ಮ ಭವಿಷ್ಯವೇನು ಎನ್ನುವ ಆತಂಕಕ್ಕೆ ಸಿಲುಕಿರುವ ಮಿತ್ರಮಂಡಳಿ ಪರವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ.