ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ನಂತರ ಸೃಷ್ಟಿಯಾಗಿರುವ ಅಸಮಾಧಾನ ಶಮನಕ್ಕೆ ಸರ್ಕಸ್ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡೆಗೂ ಸುಧಾಕರ್ ಒತ್ತಡಕ್ಕೆ ಮಣಿದು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಖಾತೆ ಹಂಚಿಕೆ ನಂತರ ಉಂಟಾದ ಅತೃಪ್ತಿ ಶಮನಕ್ಕೆ ಮುಂದಾಗಿ ಎಂಟಿಬಿ ನಾಗರಾಜ್,ನಾರಾಯಣಗೌಡ, ಶಂಕರ್ ಮತ್ತು ಗೋಪಾಲಯ್ಯ ಖಾತೆಗಳ ಬದಲಿಸಿದ್ದ ಸಿಎಂ ಸುಧಾಕರ್ ವಿಚಾರದಲ್ಲಿ ಮೌನವಾಗಿದ್ದರು. ಇದರಿಂದಾಗಿ ಸುಧಾಕರ್ ಅತೃಪ್ತಿ ಶಮನವಾಗಿರಲಿಲ್ಲ. ಅವರನ್ನು ನಿವಾಸಕ್ಕೆ ಕರೆಸಿಕೊಂಡು ಸಿಎಂ ಚರ್ಚೆ ನಡೆಸಿದ್ದರೂ ಸಂಧಾನ ಸಫಲವಾಗಿರಲಿಲ್ಲ ಎನ್ನಲಾಗ್ತಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಬೇರೆಯವರಿಗೆ ಕೊಟ್ಟಿದ್ದಕ್ಕೆ ಬೇಸರವಿಲ್ಲ. ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಒಬ್ಬರ ಬಳಿಯೇ ಇರಲಿ, ನೀವು ಯಾರಿಗಾದರೂ ಕೊಡಿ ಎರಡೂ ಇಲಾಖೆ ಒಬ್ಬರಿಗೇ ಕೊಡಿ ಕೊರೊನಾ ವೇಳ ಸಮನ್ವಯತೆ ಸಮಸ್ಯೆ ಆದರೆ ಸರಿಯಲ್ಲ. ಯಾರಿಗಾದರೂ ಒಬ್ಬರಿಗೇ ಕೊಡಿ ಎಂದಿದ್ದರು. ಹಾಗಾಗಿ ಕೊನೆಗೆ ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮರಳಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.
ಓದಿ: ಕೋಲಾರದಲ್ಲಿ ಶಾಲಾ ವಾಹನ ಪಲ್ಟಿ: 15 ಮಕ್ಕಳಿಗೆ ಗಾಯ
ಇದರ ಜೊತೆಗೆ ಸಚಿವ ಮಾಧುಸ್ವಾಮಿ ಕೂಡ ವೈದ್ಯಕೀಯ ಶಿಕ್ಷಣ ಖಾತೆಯನ್ನು ಒಪ್ಪಿಕೊಂಡಿಲ್ಲ. ಅವರ ಮನವೊಲಿಕೆ ಕಾರ್ಯ ನಡೆಸಿದರೂ ಮಾಧುಸ್ವಾಮಿ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗಲ್ಲ. ಹಾಗಾಗಿ ಅವರ ಖಾತೆಯನ್ನೂ ಬದಲಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೆ ಖಾತೆ ಅದಲು ಬದಲು..?
- ಮಾಧುಸ್ವಾಮಿ ಬಳಿ ಇರುವ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್‌ಗೆ ಹಂಚಿಕೆ ಮಾಡುವ ಸಾಧ್ಯತೆ
- ಆನಂದ್ ಸಿಂಗ್ ಬಳಿ ಇರುವ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಮಾಧುಸ್ವಾಮಿಗೆ ಹಂಚಿಕೆ ಸಾಧ್ಯತೆ
- ಆನಂದ್ ಸಿಂಗ್ಗೆ ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಹಂಚಿಕೆ ಸಾಧ್ಯತೆ
ಇಂದು ರಾಜಭವನಕ್ಕೆ ಪರಿಷ್ಕೃತ ಪಟ್ಟಿ ರವಾನೆ ಮಾಡಲಿದ್ದು, ಸಂಜೆ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಿಎಂ ಕಚೇರಿ ಮೂಲಗಳು ಮಾಹಿತಿ ನೀಡಿವೆ.