ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿಯ ಕೂಗು ಸದ್ಯ ಜೋರಾಗಿ ಕೇಳಿ ಬರುತ್ತಿದೆ. ಕುರುಬರು, ಪಂಚಮಸಾಲಿ ಲಿಂಗಾಯತರು, ವಾಲ್ಮಿಕಿ ಸಮುದಾಯದವರಿಂದ ಮೀಸಲಾತಿಯ ಒತ್ತಡ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ ಸಿಗುತ್ತಿದೆ ಇದೆ ಎಂಬುದರ ವರದಿ ಇಲ್ಲಿದೆ.
ಇದೀಗ ರಾಜ್ಯದಲ್ಲಿ ಮೀಸಲಾತಿಯ ಅಬ್ಬರ ಹೆಚ್ಚಾಗಿದೆ. ಒಂದೆಡೆ ಕುರುಬರು ಎಸ್ಟಿಗೆ ಸೇರಿಸಲು ಶಕ್ತಿ ಪ್ರದರ್ಶನ ತೋರುತ್ತಿದ್ದರೆ. ಇತ್ತ ಪಂಚಮಸಾಲಿ ಲಿಂಗಾಯತರು 2ಎ ಮೀಸಲಾತಿಗೆ ಪಟ್ಟು ಹಿಡಿದಿದ್ದಾರೆ. ಇನ್ನು ವಾಲ್ಮಿಕಿ ಸಮುದಾಯದವರು ಮೀಸಲಾತಿ ಹೆಚ್ಚಿಸುವಂತೆ ಪಟ್ಟು ಹಿಡಿದಿದ್ದಾರೆ. ಎಸ್ಟಿ ಮೀಸಲಾತಿ ಶೇ 7.5ರಷ್ಟು ಹೆಚ್ಚಿಸುವ ಸಂಬಂಧ ಸರ್ಕಾರದ ಮೇಲೆ ನಾನಾ ಸಮುದಾಯಗಳು ಒತ್ತಡ ಹೇರುತ್ತಿವೆ.
ಸುಮಾರು 101 ಜಾತಿ ಎಸ್ಸಿ, 50 ಜಾತಿ ಎಸ್ಟಿಯಲ್ಲಿವೆ. ಈಗಿರುವ ಮೀಸಲಾತಿ ಇತಿಮಿತಿಯೊಳಗೆ ಸರ್ಕಾರ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈಗಿರುವ ಮೀಸಲಾತಿಗೆ ಹೊಂದಾಣಿಕೆ ಮಾಡಿ ಇತಿಮಿತಿಯೊಳಗೆ ಮೀಸಲಾತಿ ಕಲ್ಪಿಸುವ ಅನಿವಾರ್ಯತೆ ಸಿಎಂ ಅವರದ್ದು. ಹೀಗಾಗಿ ಮೀಸಲಾತಿ ವಿಚಾರ ಸಿಎಂಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಸದ್ಯಕ್ಕೆ ರಾಜ್ಯದಲ್ಲಿನ ಮೀಸಲಾತಿ ವಿವರ:
ಸದ್ಯ ರಾಜ್ಯದಲ್ಲಿ ಎಸ್ಸಿಗೆ ಶೇ 15ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಎಸ್ಟಿ ಸಮುದಾಯಕ್ಕೆ ಶೇ 3ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ಪ್ರವರ್ಗ-1ರಲ್ಲಿ 95 ಜಾತಿಗಳಿಗೆ ಶೇ 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇನ್ನು 2ಎ ಮೀಸಲಾತಿ ಅನ್ವಯ ರಾಜ್ಯದ ಒಟ್ಟು 105 ಜಾತಿಗಳಿಗೆ ಶೇ 15ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ.
ಇದನ್ನೂ ಓದಿ: ಮಂಡ್ಯ, ದಾವಣಗೆರೆ ವಕೀಲರ ಸಂಘಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್
2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. 3ಎ ಮೀಸಲಾತಿ ಅನ್ವಯ ಒಕ್ಕಲಿಗರು, ಖಲಿಜ ಸೇರಿ ಐದು ಇತರ ಉಪಜಾತಿಗಳಿಗೆ ಶೇ 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇನ್ನು 3ಬಿಯಡಿ ಲಿಂಗಾಯತ್ ಮತ್ತು 42 ಉಪಜಾತಿಗಳಿಗೆ ಜೈನ ಸಮುದಾಯ ಒಳಗೊಂಡಂತೆ ಶೇ 5ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಇತ್ತ ಶೇ 10ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಕ್ಕೆ ನೀಡಬೇಕಾಗಿದೆ.
ಎಲ್ಲಾ ಪ್ರವರ್ಗಗಳ 206 ಜಾತಿಗಳಿಗೆ ಶೇ 32ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಎಸ್ಸಿ ಮತ್ತು ಎಸ್ಟಿಯಡಿ ಒಟ್ಟು105 ಜಾತಿಗಳಿಗೆ ಶೇ 18ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಮಧ್ಯೆ ಆರ್ಥಿಕವಾಗಿ ದುರ್ಬಲರಿಗೆ ಶೇ 10ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಆದರೆ ಅದರ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ.
ಸುಪ್ರೀಂಕೋರ್ಟ್ನ ಶೇ 50ರಷ್ಟು ಮೀಸಲಾತಿ ಮಿತಿ:
ಸುಪ್ರೀಂಕೋರ್ಟ್ ಈಗಾಗಲೇ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 50ರಷ್ಟು ಮಿತಿಗೆ ನಿಗದಿಗೊಳಿಸಿದೆ. ಈ ಮಿತಿ ಎಸ್ಟಿ ಮೀಸಲಾತಿಯನ್ನು ಶೇ 7.5ರಷ್ಟು ಹೆಚ್ಚಿಸಲು ಅಡ್ಡಗಾಲಾಗಿ ಪರಿಣಮಿಸಿದೆ. ಮಹಾರಾಷ್ಟ್ರ ಮರಾಠ ಮೀಸಲಾತಿಯಿಂದಾಗಿ ಒಟ್ಟು ಮೀಸಲಾತಿ ಮಿತಿ ಶೇ 64ರಷ್ಟಿದ್ದು, ತಮಿಳುನಾಡಿನಲ್ಲಿ ಒಟ್ಟು ಶೇ 69ರಷ್ಟು ಮೀಸಲಾತಿ ಇದೆ. ಆ ಮೂಲಕ ಈ ಎರಡು ರಾಜ್ಯಗಳು ಸುಪ್ರೀಂ ಕೋರ್ಟ್ ನಿಗದಿ ಗೊಳಿಸಿದ 50% ಮಿತಿಯನ್ನು ಮೀರಿ ಮೀಸಲಾತಿಯನ್ನು ನೀಡುತ್ತಿದೆ.
ಅದೇ ರೀತಿ ಆಂಧ್ರ ಪ್ರದೇಶ, ರಾಜಸ್ತಾನ, ಹರಿಯಾಣ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೂ ಶೇ 50ರಷ್ಟು ಮೀಸಲಾತಿ ಮಿತಿ ಮೀರಿ ಮೀಸಲಾತಿ ನೀಡುವ ಚಿಂತನೆಯಲ್ಲಿವೆ.