ಬೆಂಗಳೂರು: ಕೊರೊನಾ ಸಮಯದಲ್ಲಿ ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದ ಪೊಲೀಸರ ಕುಟುಂಬ ಸದಸ್ಯರು ಲಾಕ್ಡೌನ್ ಸಮಯದಲ್ಲಿ ಪೊಲೀಸರಿಗೆ ಜನತೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪೊಲೀಸರಿಗೂ ಕುಟುಂಬ ಇದೆ. ಅವರ ಜೀವನ ಕೂಡ ಮುಖ್ಯ, ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದರೂ ಕೂಡ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಂದಿನಿ ಲೇಔಟ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಕ್ತಾರಂ ಮಗಳು ಮನಲಿನಿ ಮಾತನಾಡಿ, 23 ವರ್ಷದಿಂದ ನನ್ನ ತಂದೆ ಪೊಲೀಸ್ ಇಲಾಖೆಯಲ್ಲಿ ಸೆವೆ ಸಲ್ಲಿಸಿದ್ದರು. ಆದರೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ತಮ್ಮ ಪ್ರಾಣ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಸರ್ಕಾರದ ಗೈಡ್ ಲೈನ್ಸ್ ಪಾಲಿಸುವ ಮೂಲಕ ಪೊಲೀಸರ ಹಾಗೂ ಅವರ ಕುಟುಂಬಸ್ಥರ ಅಮೂಲ್ಯವಾದ ಜೀವವನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.
ಮುದುಡಮ್ಮ ಎಂಬುವರು ಮಾತನಾಡಿ, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ನನ್ನ ಗಂಡ ಕೆಲಸ ಮಾಡುತ್ತಿದ್ದರು. ಕಳೆದ ಲಾಕ್ಡೌನ್ ಟೈಂನಲ್ಲಿ ವಿನಾಕಾರಣ ಓಡಾಡುತ್ತಿದ್ದ ವಾಹನಗಳನ್ನ ಜಪ್ತಿ ಮಾಡಿದ್ದರು. ಆಟೋವನ್ನು ಸುರಕ್ಷಿತ ಜಾಗಕ್ಕೆ ತಲುಪಿಸುವಾಗ ಅಪಘಾತಲ್ಲಿ ಮೃತಪಟ್ಟಿದ್ದಾರೆ. ಈಗ ಜೀವನ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ಜನ ಮನೆಯಲ್ಲಿದ್ದು, ಪೊಲೀಸರ ಆರೋಗ್ಯ ಕಾಪಾಡಿ ಎಂದು ಮನವಿ ಮಾಡಿದ್ದಾರೆ.