ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯಂದು ಭದ್ರತೆ ದೃಷ್ಟಿಯಿಂದ ಬೆಂಗಳೂರಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಮುಂಚಿತವಾಗಿ ಮಹಾತ್ಮಾ ಗಾಂಧಿ ರಸ್ತೆಯಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ತಾಲೀಮು ನಡೆಸಲಾಯಿತು. ಇನ್ನು ತಾಲೀಮು ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಹಾಗೂ ಹಿರಿಯ ಪೊಲಿಸ್ ಅಧಿಕಾರಿಗಳು, ಹಾಗೂ ಜಿಲ್ಲಾಧಿಕಾರಿ ಭಾಗಿಯಾಗಿದ್ದರು.
ಗಣರಾಜ್ಯೋತ್ಸವ ದಿನಕ್ಕೆ ಪೂರ್ವಭಾವಿ ಸಿದ್ಧತೆ ಹೀಗಿದೆ.
ಜನವರಿ 26ರಂದು ರಾಜ್ಯಪಾಲರು ಸುಮಾರು 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂಧರ್ಭದಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಲಿದೆ. ಇದಾದ ನಂತರ ಪಥಸಂಚಲನದಲ್ಲಿ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ ಅಂಡ್ ಗೈಡ್ಸ್, ಎನ್ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳ 44 ತುಕಡಿಯ 1,750 ಮಂದಿ ಭಾಗಿಯಾಗಲಿದ್ದಾರೆ.
ವಿಶೇಷವೆಂದರೆ ಮೊದಲ ಬಾರಿಗೆ ಸ್ವಚ್ಛ ಭಾರತ್ ಅಭಿಯಾನ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಬಿಬಿಎಂ ಪೌರ ಕಾರ್ಮಿಕರಿಂದ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.
ಭದ್ರತೆ ಹೇಗಿದೆ?
ಗಣರಾಜ್ಯೋತ್ಸವದ ದಿನ ಹೈ ಅಲರ್ಟ್ ಘೋಷಣೆ ಮಾಡಿ ಸಿಲಿಕಾನ್ ಸಿಟಿಯಲ್ಲಿ ಸಂಪೂರ್ಣವಾಗಿ ಖಾಕಿ ಗಸ್ತು ತಿರುಗಲಿದ್ದಾರೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು. ಇನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕಳೆದ 15 ದಿನಗಳಿಂದ ಮೈದಾನಕ್ಕೆ 75 ಪೊಲೀಸ್ ಅಧಿಕಾರಿಗಳು ಮುಂಜಾಗೃತವಾಗಿ ತಪಾಸಣೆ ನಡೆಸಿ ಹೋಟೆಲ್, ಲಾಡ್ಜ್ಗಳು, ತಂಗುದಾಣಗಳ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮಾಣಿಕ್ ಷಾ ಮೈದಾನದ ಬಳಿ 8 ಡಿಸಿಪಿಗಳ ನೇತೃತ್ವದಲ್ಲಿ 150 ಅಧಿಕಾರಿಗಳು ಮತ್ತು 943 ಸಿಬ್ಬಂದಿ, 10 ಕೆಎಸ್ಆರ್ಪಿ ತುಕಡಿ, 2 ಡಿಸ್ಟ್ಯಾಡ್ ತಂಡ, 1 ಕ್ಷಿಪ್ರ ಕಾರ್ಯಾಚರಣೆ ಪಡೆ, ಗರುಡ ಪಡೆ, ಕಮಾಂಡ್ ಕಂಟ್ರೋಲ್ ವಾಹನಗಳು, ಮೈದಾನದ ಸಂಪೂರ್ಣ ತಪಾಸಣೆಗೆ 7 ಎಎಸ್ ಚೆಕ್ ತಂಡ, 85 ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ನಿಷಿದ್ಧ ವಸ್ತುಗಳು
ಮೈದಾನದ ಸುತ್ತಾ ಸಿಗರೇಟ್, ಬೆಂಕಿ ಪೊಟ್ಟಣ, ಕರಪತ್ರ, ಹರಿತವಾದ ವಸ್ತು, ಚೂರಿ, ಕಪ್ಪು ವಸ್ತ್ರ, ಬಣ್ಣದ ದ್ರಾವಣ, ತಿಂಡಿ ತಿನಿಸು, ವಿಡಿಯೋ ಮತ್ತು ಸ್ಟಿಲ್ ಕ್ಯಾಮರಾ, ಮದ್ಯದ ಬಾಟಲ್, ಮಾದಕ ವಸ್ತು, ನೀರಿನ ಬಾಟಲ್, ಶಸ್ತ್ರಾಸ್ತ್ರಗಳು, ಪಟಾಕಿ ಮತ್ತು ಸ್ಫೋಟಕ ನಿಷೇಧ ಮಾಡಲಾಗಿದೆ.
ಇನ್ನು ಸಂಚಾರ ಕುರಿತು ಟ್ರಾಫಿಕ್ ಆಯುಕ್ತ ರವೀಕಾಂತೆಗೌಡ ಅವರ ತಂಡ ಅಲರ್ಟ್ ಆಗಿದ್ದು, ಹಳದಿ ಕಾರ್ಡ್ ಹೊಂದಿರುವವರು ಪ್ರವೇಶ ದ್ವಾರ-1, ಬಿಳಿ ಕಾರ್ಡ್ ಪಾಸ್ ಹೊಂದಿರುವವರು ಪ್ರವೇಶ ದ್ವಾರ-2, ಇದರಲ್ಲಿ ಗಣ್ಯರು, ಗೃಹ ಸಚಿವರು, ಸರ್ಕಾರದ ಕಾರ್ಯದರ್ಶಿಗಳು ಬರಲಿದ್ದಾರೆ. ಹಾಗೆಯೇ ಪಿಂಕ್ ಪಾಸ್ ಹೊಂದಿರುವವರು ಗೇಟ್ ನಂಬರ್ ಮೂರರಲ್ಲಿ, ಹಸಿರು ಬಣ್ಣದ ಪಾಸ್ ಹೊಂದಿರುವವರು ಪ್ರವೇಶ ದ್ವಾರ ನಾಲ್ಕರಲ್ಲಿ ಬರಲು ಅವಾಕಾಶವಿದೆ. ಮೈದಾನದ ಸುತ್ತಮುತ್ತ ವಾಹನ ನಿಷೇಧ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.