ಬೆಂಗಳೂರು: ಕೋವಿಡ್ ಎರಡನೇ ಅಲೆಯ ಸಂಪೂರ್ಣ ನಿಯಂತ್ರಣಕ್ಕಾಗಿ ಜೂನ್ 7 ರ ನಂತರ ರಾಜ್ಯ ಸರ್ಕಾರ ಮುಂದೇನು ಮಾಡಬೇಕು ಎನ್ನುವ ಅಂಶಗಳನ್ನೊಳಗೊಂಡ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ತನ್ನ ವರದಿ ಸಲ್ಲಿಕೆ ಮಾಡಿದೆ.
ಲಾಕ್‌ಡೌನ್ ಮುಂದುವರೆಸಬೇಕಾ, ಬೇಡವಾ?, ಒಂದು ವೇಳೆ ಮುಂದುವರೆಸಿದರೆ ಎಷ್ಟು ದಿನ ಲಾಕ್‌ಡೌನ್ ಮುಂದುವರೆಸಬೇಕು? ಅಥವಾ ಫ್ರೀಡೌನ್ ಶುರು ಮಾಡಬೇಕಾ? ಎನ್ನುವ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಆರೋಗ್ಯ ಸಚಿವ ಡಾ.ಸುಧಾಕರ್ಗೆ ಸಮಿತಿ ಹಸ್ತಾಂತರಿಸಿತು. ವರದಿಯೊಂದಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಸಚಿವ ಸುಧಾಕರ್, ಸಿಎಂ ಯಡಿಯೂರಪ್ಪ ಅವರಿಗೆ ತಜ್ಞರ ಸಮಿತಿ ವರದಿಯನ್ನು ನೀಡಿದ್ದಾರೆ.
ತಜ್ಞರ ಸಮಿತಿ ವರದಿಯಲ್ಲಿ ಏನಿರಬಹುದು?
ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ಜೂನ್ 7 ಕ್ಕೆ ಮುಕ್ತಾಯಗೊಳ್ಳಲಿದ್ದು, ಮುಂದಿನ 14 ದಿನಗಳ ಲಾಕ್‌ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ. ಈ ಕುರಿತು ಸಿಎಂ ಜೊತೆ ಸುಧಾಕರ್ ಚರ್ಚೆ ನಡೆಸಿದ್ದು, ಲಾಕ್‌ಡೌನ್ ಮುಕ್ತಾಯಕ್ಕೆ ಇನ್ನೂ ಸಮಯವಿದೆ. ಹೀಗಾಗಿ ಈಗಲೇ ನಿರ್ಧಾರ ಕೈಗೊಳ್ಳುವುದು ಬೇಡ. ಜೂನ್ 4 ಅಥವಾ 5 ರಂದು ಈ ಬಗ್ಗೆ ನಿರ್ಧರಿಸೋಣ ಎಂದು ಸಚಿವ ಸುಧಾಕರ್ ಗೆ ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೊರೊನಾ ಕಂಟ್ರೋಲ್ಗೆ ಲಾಕ್‌ಡೌನ್ ಮುಂದುವರೆಯುತ್ತಾ?