ಬೆಂಗಳೂರು: ಮುಖ್ಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಮತ್ತೆ ಕಳಪೆ ಕಾಮಗಾರಿ ಕಂಡು ಬಂದಿದೆ. ಕಳೆದ ತಿಂಗಳು ಸೇತುವೆ ಮೇಲೆ ದೊಡ್ಡ ರಂದ್ರ ನಿರ್ಮಾಣವಾಗಿದ್ದು, ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು. ನಂತರ ಬಿಬಿಎಂಪಿ ಹದಿನೆಂಟು ದಿನಗಳ ಕಾಲ ರಿಪೇರಿ ಕಾರ್ಯ ಕೈಗೊಂಡು ಸರಿಪಡಿಸಿತ್ತು. ಸದ್ಯ ಇದ್ದ ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ, ಈಗ ಖಾಸಗಿ ಸಂಸ್ಥೆಯೊಂದು ನೀಡಿರೋ ವರದಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಸೃಷ್ಟಿಯಾದ ರಂದ್ರದಿಂದ ಎಚ್ಚೆತ್ತ ಬಿಬಿಎಂಪಿ, ಸದೃಢತೆಯ ಪರೀಕ್ಷೆ ಮಾಡಲು ನಿರ್ಧರಿಸಿತ್ತು. ಅದಕ್ಕಾಗಿ ಖಾಸಗಿ ಕಂಪನಿಯೊಂದನ್ನ ನೇಮಿಸಿತ್ತು. ಆದರೆ, ಖಾಸಗಿ ಕಂಪನಿ ಪರೀಕ್ಷೆ ನಡೆಸಿ ಬಿಡುಗಡೆ ಮಾಡಿರುವ ವರದಿಯಲ್ಲಿ, ಫ್ಲೈಓವರ್‌ನ ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. ಸೇತುವೆ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕೂಡಿದೆ. ಸೇತುವೆಯ ರ್ಯಾಂಪ್ ಹಾಗೂ ಪಿಲ್ಲರ್ ಮಧ್ಯೆ ಅಳವಡಿಸಿರುವ ಬೇರಿಂಗ್‌ನಲ್ಲೂ ದೋಷವಿದೆ. ಹಲವು ಭೀಮ್ ಹಾಗೂ ಸ್ಲ್ಯಾಬ್‌ಗಳಲ್ಲಿ ಹನಿಕೂಂಬ್ ಸೃಷ್ಟಿಯಾಗಿದೆ. ಇದು ಸೇತುವೆ ಸುರಕ್ಷತೆ ಮತ್ತು ಸದೃಢತೆಗೆ ಧಕ್ಕೆ ಉಂಟು ಮಾಡಲಿದೆ ಎಂಬ ಆತಂಕಕಾರಿ ವಿಷಯವನ್ನ ತಿಳಿಸಿದೆ.
ಖಾಸಗಿ ಕಂಪನಿಯ ವರದಿಯಿಂದ ಬಿಬಿಎಂಪಿ ಫುಲ್ ಅಲರ್ಟ್ ಆಗಿದ್ದು, ದೋಷದಿಂದ ಕೂಡಿರುವ ಬೇರಿಂಗ್ಗಳನ್ನು ಬದಲಾಯಿಸಲು ನಿರ್ಧರಿಸಿದೆ. ಹನಿಕೂಂಬ್ ಭಾಗಗಳನ್ನು ರಿಪೇರಿ ಮಾಡಲೂ ಸಹ ತೀರ್ಮಾನಿಸಿದೆ. ಈ ಬಗ್ಗೆ ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳು ಫ್ಲೈಓವರ್ ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್ 15ರಿಂದ ರಿಪೇರಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.