ಬೆಂಗಳೂರು: ನಾನು ಹಾದಿ ಬೀದಿಯಲ್ಲಿ ಮಾತಾಡಿಲ್ಲ ನನಗೆ ಎಚ್ಚರಿಕೆ, ತಿಳುವಳಿಕೆ ನೀಡಲು ಯಡಿಯೂರಪ್ಪ, ಹೈಕಮಾಂಡ್ ಇದ್ದಾರೆ. ನನಗೆ ಡಿಸಿಎಂ ಅಶ್ವತ್ಥ ನಾರಾಯಣ ನೀತಿ ಪಾಠ ಹೇಳೋ ಅಗತ್ಯ ಇಲ್ಲವೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಯೋಧ್ಯೆ ಹೋರಾಟದಿಂದಲೂ ಬಿಜೆಪಿಯಲ್ಲಿ ಇರೋನು. ನನಗೂ ಸಂಘ ಪರಿವಾರದ ಹಿನ್ನೆಲೆ ಇದೆ. ನನಗೆ ಎಲ್ಲಿ ಮಾತಾಡಬೇಕು, ಏನು ಮಾತಾಡಬೇಕು ಅಂತ ಗೊತ್ತಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ್ಗೆ ಟಾಂಗ್ ನೀಡಿದರು.
ಡಿಸಿಎಂ ಹುದ್ದೆಗಳ ರದ್ದು ನನ್ನೊಬ್ಬನ ಅಭಿಪ್ರಾಯ ಅಲ್ಲ. ಜನರು, ಶಾಸಕರು ಸಹ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದು ಮಾಡಬೇಕೆಂಬ ಅನಿಸಿಕೆ ಇಟ್ಕೊಂಡಿದ್ದಾರೆ. ನಾನು ಹೇಳಿಕೆ ನೀಡಿದ ನಂತರ ಸಾಕಷ್ಟು ಶಾಸಕರು ನನ್ನ ಜೊತೆ ಮಾತನಾಡಿ ಸರಿಯಾದ ಹೇಳಿಕೆ ನೀಡಿದ್ದೀರಿ. ನಾವು ಮಾತನಾಡಲು ಆಗಲ್ಲ. ನೀವು ಮಾತನಾಡಿದ್ದೀರಿ ಅಂತ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಾನು ಯಡಿಯೂರಪ್ಪ ಅಥವಾ ಹೈಕಮಾಂಡ್ ನಾಯಕರನ್ನು ಪ್ರಶ್ನೆ ಮಾಡಿಲ್ಲ. ಹಾಗೆಯೇ ನಾನು ಹಾದಿ, ಬೀದಿಯಲ್ಲಿ ಮಾತಾಡಿಲ್ಲ. ನನಗೆ ಎಚ್ಚರಿಕೆ, ತಿಳುವಳಿಕೆ ಕೊಡಲು ಯಡಿಯೂರಪ್ಪ, ಹೈಕಮಾಂಡ್ ನಾಯಕರು ಇದ್ದಾರೆ. ನಾನೊಬ್ಬ ಶಾಸಕ. ನನಗೂ ಮಾತನಾಡುವ ಹಕ್ಕಿದೆ. ಈ ಸಂಬಂಧ ಒಂದೆರಡು ದಿನದಲ್ಲಿ ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ನನಗೆ ಅಶ್ವತ್ಥ ನಾರಾಯಣ ಎಚ್ಚರಿಕೆ ಕೊಡ್ತಾರಲ್ಲ. ಅಂಥವರು ಸಚಿವ ಸ್ಥಾನ ತ್ಯಾಗ ಮಾಡಿ ಸಚಿವ ಸ್ಥಾನವನ್ನು ಬಿಟ್ಟುಕೊಡಲಿ ನೋಡೋಣ ಎಂದು ರೇಣುಕಾಚಾರರ್ಯ ಸವಾಲೆಸೆದರು.
ಇನ್ನು ಪೌರತ್ವ ತಿದ್ದುಪಡಿ ಕಾಯ್ದೆಗೆ ಮಾಜಿ ಸಚಿವ ಯು.ಟಿ.ಖಾದರ್ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಹೊತ್ತಿ ಉರಿಯಲಿದೆ ಎಂದಿದ್ದಾರೆ. ಈ ರೀತಿ ಹುಚ್ಚು-ಹುಚ್ಚಾಗಿ ಹೇಳಿಕೆ ಕೊಡಬೇಡ. ನಿನ್ನ ಹುಚ್ಚು ಹೇಳಿಕೆಯನ್ನು ನಾವು ಸಹಿಸಲ್ಲ. ಇಂಥ ಹೇಳಿಕೆ ಕೊಟ್ಟರೆ ನಿನಗೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ. ಇದೇ ರೀತಿ ಮಾತನಾಡಿದರೆ ಅಧಿವೇಶನದಲ್ಲಿ ಭಾಗವಹಿಸಲು ಬಿಡಲ್ಲ ಎಂದು ಏಕವಚನದಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ರು.