ಬೆಂಗಳೂರು: ತಮ್ಮನ್ನು ವಾಟ್ಸಾಪ್ ಗ್ರೂಪ್ನ ಅಡ್ಮಿನ್ ಮತ್ತು ಸದಸ್ಯ ಸ್ಥಾನದಿಂದ ತೆಗೆದು ಹಾಕಿದ ಕ್ರಮ ಆಕ್ಷೇಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ.
ನಿರ್ಗತಿಕರಿಗೆ ನೆರವು ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ದಿ ರಾಬಿನ್ ಹುಡ್ ಪ್ರಾಜೆಕ್ಟ್ ಟ್ರಸ್ಟ್ ನ ವಾಟ್ಸ್ ಆ್ಯಪ್ ಗ್ರೂಪ್‌ಗಳ ಅಡ್ಮಿನ್ ಹಾಗೂ ಸದಸ್ಯ ಸ್ಥಾನದಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿ ಬೆಂಗಳೂರಿನ ಮೊಹಮ್ಮದ್ ಶರೀಫ್ ಎಂಬುವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಅವರಿದ್ಧ ಪೀಠ, ಅರ್ಜಿದಾರರು ಸಿವಿಲ್ ಅಥವಾ ಇತರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ತಮ್ಮ ಕುಂದುಕೊರತೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಅರ್ಜಿದಾರರ ದೂರು
ಟ್ರಸ್ಟ್‌ನ ಸೇವಾ ಕಾರ್ಯಗಳನ್ನು ಬಡವರಿಗೆ, ನಿರ್ಗತಿಕರಿಗೆ ತಲುಪಿಸುವ ಕೆಲಸದಲ್ಲಿ ನಾನು ತೊಡಗಿಸಿಕೊಂಡಿದ್ದೆ. ಆದರೂ ಸುಳ್ಳು ಆರೋಪಗಳನ್ನು ಮಾಡಿ ವಾಟ್ಸಪ್ ಗ್ರೂಪ್ನಿಂದ ತೆಗೆದುಹಾಕಿದ್ದಾರೆ. ಆದ್ದರಿಂದ, ಸುಳ್ಳು ಆರೋಪ ಹೊರಿಸಿ ಮಾನಹಾನಿ ಮಾಡಿದ್ದಕ್ಕೆ ನಷ್ಟ ಪರಿಹಾರ ನೀಡಲು ಹಾಗೂ ಮತ್ತೆ ವಾಟ್ಸಾಪ್ ಗ್ರೂಪ್ಗೆ ಸೇರಿಸಲು ಟ್ರಸ್ಟ್‌ಗೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಟ್ರಸ್ಟ್, ಸಂಸ್ಥಾಪಕರು, ಟ್ರಸ್ಟಿಗಳು ಹಾಗೂ ಮುಂಬೈ, ಬೆಂಗಳೂರು, ನವದೆಹಲಿಯ ಸ್ವಯಂ ಸೇವಕರನ್ನು ಪ್ರತಿವಾದಿಗಳಾಗಿ ಸೇರಿಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಅಬ್ಬರಿಸುತ್ತಿದೆ ಕೋವಿಡ್: ಅಗತ್ಯಬಿದ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ..