ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದ ಕೊರೊನಾ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ರೆಮ್ಡೆಸಿವಿರ್ ಚುಚ್ಚುಮದ್ದು ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.
ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2,800 ರೂಪಾಯಿಂದ 899 ರೂಪಾಯಿಗೆ ಇಳಿಸಿದೆ. ಬೇರೆ ಬೇರೆ ಕಂಪನಿಗಳ ವಿವಿಧ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಗಳಲ್ಲಿ ಇಳಿಕೆಯಾಗಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿರುವ ಕೇಂದ್ರ ಸಚಿವ ಸದಾನಂದ ಗೌಡ, ಬೆಲೆ ಇಳಿಸಿರುವ ಫಾರ್ಮಾ ಕಂಪನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅದೇ ರೀತಿ ರೆಮ್ಡೆಸಿವಿರ್ ಮಾಸಿಕ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ಅಮೆರಿಕದ ಗಿಲೀಡ್ ಸೈಯನ್ಸಸ್ (Gilead Sciences) ಕಂಪನಿಯು ರೆಮ್ಡೆಸಿವಿರ್ ಚುಚ್ಚುಮದ್ದಿನ ಪೆಟೆಂಟ್ ಹೊಂದಿದ್ದು, ಭಾರತದ ಏಳು ಫಾರ್ಮಾ ಕಂಪನಿಗಳು ಉತ್ಪಾದನಾ ಲೈಸೆನ್ಸ್ ಪಡೆದಿವೆ. ಅವುಗಳ ಈಗಿನ ಸ್ಥಾಪಿತ ಉತ್ಪಾದನಾ ಸಾಮರ್ಥ್ಯ 38.8 ಲಕ್ಷ ವೈಯಲ್ಸ್ (ಬಾಟಲಿ). ಹೆಚ್ಚುವರಿಯಾಗಿ 35.3 ಲಕ್ಷ ವೈಯಲ್ಸ್ ಉತ್ಪಾದಿಸಲು ಅನುಮತಿ ನೀಡಲಾಗಿದೆ. ಇದರಿಂದ ಮಾಸಿಕ ರೆಮ್ಡೆಸಿವಿರ್ ಉತ್ಪಾದನೆ 74.1 ಲಕ್ಷ ವೈಯಲ್ಸಿಗೆ ಏರಿಕೆಯಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಪ್ರತಿದಿನ ಅಂದಾಜು 1.35 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ಉತ್ಪಾದನೆಯಾಗುತ್ತಿದೆ. ರೆಮ್ಡೆಸಿವಿರ್ ರಫ್ತು ನಿಷೇಧಿಸಿರುವುದರಿಂದ ಹೆಚ್ಚುವರಿಯಾಗಿ ಸುಮಾರು 4 ಲಕ್ಷ ವೈಯಲ್ಸ್ ರೆಮ್ಡೆಸಿವಿರ್ ಆಂತರಿಕ ಬಳಕೆಗೆ ಲಭ್ಯವಿದೆ. ಇನ್ನೊಂದು ವಾರೊಪ್ಪತ್ತಿನಲ್ಲಿಯೇ ಬೇಡಿಕೆ ಹಾಗೂ ಪೂರೈಕೆಯಲ್ಲಿ ಸಮತೋಲನ ಕಂಡುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಬ್ರಾಂಡಿನ ರೆಮ್ಡೆಸಿವಿರ್ ಬೆಲೆ ಇಳಿಕೆ ಹೀಗಿದೆ...
ಡಾ ರೆಡ್ಡೀಸ್ ಕಂಪನಿಯ ರೆಡಿಕ್ಸ್ - ರೂ. 2,700 (ಮುಂಚಿನ ಬೆಲೆ 5,400 ರೂ.)
ಸಿಂಜಿನ್ (ಬಯೊಕಾನ್) ಕಂಪನಿಯ ರೆಮ್ವಿನ್- ರೂ. 2,450 (ರೂ. 3,950)
ಸಿಪ್ಲಾ ಕಂಪನಿಯ ಸಿಪ್ರೆಮಿ ರೂ. 3,000 (ರೂ. 4,000)
ಮಿಲನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಡೆಸ್ರೆಮ್ ರೂ. 3,400 (ರೂ. 4,800)
ಜ್ಯುಬಿಲೆಂಟ್ ಜೆನರಿಕ್ಸ್ ಕಂಪನಿಯ ಜ್ಯುಬಿ-ಆರ್ ರೂ. 3,400 (ರೂ. 4,700)
ಹೆಥೆರೋ ಹೆಲ್ತ್ ಕೇರ್ ಕಂಪನಿಯ ಕೊವಿಫೊರ್ ರೂ.3,490 (ರೂ. 5,400)