ಬೆಂಗಳೂರು: ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನಿಯಂತ್ರಣ ಮಾಡಲು ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಸುದ್ದಿ ವಾಹಿನಿಗಳು ಸೇರಿದಂತೆ ಖಾಸಗಿ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನಿಯಂತ್ರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆ ಹಾಗೂ ವಕೀಲೆ ಗೀತಾ ಮಿಶ್ರ ಅರ್ಜಿ ಸಲ್ಲಿಸಿದ್ದರು. ಇವರ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲ ಶ್ರೀನಿಧಿ ಪೀಠಕ್ಕೆ ಮಾಹಿತಿ ನೀಡಿ, ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಆಕ್ಷೇಪಾರ್ಹ ಕಾರ್ಯಕ್ರಮಗಳ ವಿರುದ್ಧ ಸಾರ್ವಜನಿಕರು ಸಲ್ಲಿಸುವ ದೂರುಗಳನ್ನು ದಾಖಲಿಸಲು ಹಾಗೂ ಇತ್ಯರ್ಥಪಡಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮಿತಿ ರಚಿಸಲಾಗಿದ್ದು, ಈ ಸಮಿತಿಗಳು ತಲಾ ಒಂದೊಂದು ಸಭೆ ನಡೆಸಿವೆ. ಕೊಡಗು ಜಿಲ್ಲೆಯಲ್ಲಿ ಒಂದು ದೂರು ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ. ಹಾಸನ ಜಿಲ್ಲೆಯಲ್ಲಿ ದಾಖಲಾಗಿದ್ದ ಎರಡು ದೂರುಗಳನ್ನು , ಇತ್ಯರ್ಥ ಮಾಡಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ವಕೀಲರ ಹೇಳಿಕೆ ಮತ್ತು ಮೆಮೊ ದಾಖಲಿಸಿಕೊಂಡ ಪೀಠ, ಮಾರ್ಚ್ 31ರವರೆಗೆ ದಾಖಲಾಗುವ ಪ್ರಕರಣಗಳು ಹಾಗು ಅವುಗಳ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ:
ಧಾರವಾಹಿ ಸೇರಿದಂತೆ ಟಿ.ವಿ.ವಾಹಿನಿಗಳಲ್ಲಿ ಪ್ರಸಾರವಾಗುವ ಬಹುತೇಕ ಕಾರ್ಯಕ್ರಮಗಳ ದೃಶ್ಯಗಳು, ಸಿನಿಮಾ ದೃಶ್ಯಗಳು ಅಸಭ್ಯ ಹಾಗೂ ಕೀಳು ಅಭಿರುಚಿಯಿಂದ ಕೂಡಿವೆ. ಕಾರ್ಯಕ್ರಮಗಳು ಸೆನ್ಸಾರ್‌ಗೊಳಪಡದೇ ಪ್ರಸಾರವಾಗುತ್ತಿದ್ದರೂ, ಸಂಬಂಧಿಸಿದವರು ಅವುಗಳ ಮೇಲ್ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯ ಕೆಡುತ್ತಿದ್ದು, ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಇಂತಹ ಕಾರ್ಯಕ್ರಮಗಳನ್ನು ನಿಯಂತ್ರಣ ಮಾಡಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ರೆಗ್ಯೂಲೇಷನ್ಸ್ ಆ್ಯಕ್ಟ್-1995 ಜಾರಿಗೆ ತರಲಾಗಿದೆ. ಕಾಯ್ದೆಯ ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 2008ರ ಫೆ.19ರಂದು ಸುತ್ತೋಲೆ ಹೊರಡಿಸಿರುವ ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿರುವ ಟಿವಿ ವಾಹಿನಿಗಳ ಕಾರ್ಯಕ್ರಮಗಳನ್ನು ನಿಯಂತ್ರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಈ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ಕಾಯ್ದೆಯ ಅನ್ವಯ ಮತ್ತು ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರವು ಕೂಡಲೇ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ಮುಂದಿನ ಆರು ವಾರಗಳಲ್ಲಿ ರಚಿಸಬೇಕು. ಟಿ.ವಿ. ವಾಹಿನಿಗಳಲ್ಲಿ ಆಕ್ಷೇಪಾರ್ಹ ಸುದ್ದಿ, ಕಾರ್ಯಕ್ರಮ ಪ್ರಸಾರವಾದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ದೂರು ಸ್ವೀಕರಿಸಲು ಸಮಿತಿ ರಚಿಸಬೇಕು. ಈ ಘಟಕಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಬೇಕು. ಸಮಿತಿಗಳನ್ನು ರಚನೆ ಮಾಡಿರುವ ಬಗ್ಗೆ ಜಾಹೀರಾತು ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಇನ್ನು ಅರ್ಜಿದಾರರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿದ್ದರು.