ಬೆಂಗಳೂರು : ಲಾಕ್ಡೌನ್ನಿಂದ ತತ್ತರಿಸಿದ್ದ ಆಟೋಮೊಬೈಲ್ ಕ್ಷೇತ್ರ ಸದ್ಯ ಚೇತರಿಕೆಯ ಹಾದಿ ಹಿಡಿದಿದೆ. ಶೇ.60ಕ್ಕೂ ಅಧಿಕ ಪ್ರಮಾಣದಲ್ಲಿ ಬುಕ್ಕಿಂಗ್ ಕಾರ್ಯ ನಡೆಯುತ್ತಿದೆ. ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ವಾಹನ ಖರೀದಿ ಭರಾಟೆ ಜೋರಾಗಿತ್ತು. ಕೊರೊನಾಗೂ ಮುನ್ನ ಕೊರೊನಾ ನಂತರ ಎಂದು ಹೋಲಿಸಿದರೆ ವಾಹನ ಖರೀದಿಯಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.
ಇದನ್ನೂ ಓದಿ...ಚೇತರಿಕೆ ಪ್ರಮಾಣ ಹೆಚ್ಚಿದೆ ಎಂದು ಅಸಡ್ಡೆ ಬೇಡ: ಪ್ರಧಾನಿ ಮೋದಿ ಎಚ್ಚರಿಕೆ
ಕೊರೊನಾ ಭೀತಿಯಿಂದಾಗಿ ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುತ್ತಿರುವ ಜನರು, ಸ್ವಂತ ವಾಹನ ಖರೀದಿಗೆ ಒಲವು ತೋರುತ್ತಿದ್ದಾರೆ. ಈ ಮೊದಲೇ ಅಧಿಕವಾಗಿದ್ದ ವಾಹನಗಳ ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗಲಿದ್ದು, ಇದರಿಂದ ಸಿಲಿಕಾನ್ ಸಿಟಿಯಲ್ಲಿ ಊಹೆಗೂ ಮೀರದಂತೆ ವಾಹನದ ದಟ್ಟಣೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಈ ವರ್ಷ ವಾಹನ ನೋಂದಣಿ ಮಾಡಿಸಿಕೊಂಡ ವಿವರ
ಕ್ರ.ಸಂ | ತಿಂಗಳು | ದ್ವಿಚಕ್ರ | ನಾಲ್ಕುಚಕ್ರ | ಪರವಾನಗಿ |
1. | ಮೇ | 980 | 2,428 | - |
2. | ಜೂನ್ | 1,033 | 3,140 | 2,963 |
3. | ಜುಲೈ | 1,100 | 3,600 | 1,581 |
4. | ಆಗಸ್ಟ್ | 1,600 | 4,000 | 2,962 |
5. | ಸೆಪ್ಟೆಂಬರ್ | 1,805 | 3,899 | 3,915 |
6. | ಅಕ್ಟೋಬರ್ | 2,023 | 4,800 | - |
ಈ ಕುರಿತು ಆರ್ಟಿಒ ಇನ್ಸ್ಪೆಕ್ಟರ್ ರಾಜಣ್ಣ ಮಾತನಾಡಿ, ಜನರು ಕೊರೊನಾ ಬಳಿಕ ಸಮೂಹ ಸಾರಿಗೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಸೋಂಕು ಹತ್ತಿರ ಸುಳಿಯದಂತಿರಲು ಅಥವಾ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಜನ ಹೊಸ ವಾಹನ ಖರೀದಿಗೆ ಮುಂದಾಗಿದ್ದಾರೆ. ಮೇನಲ್ಲಿ ಕೊಂಚ ಮಟ್ಟಿಗೆ ವಾಹನ ಖರೀದಿಯಲ್ಲಿ ಸುಧಾರಿಸಿತು. ಅದರಲ್ಲಿ ಬಹುತೇಕ ಕಾರುಗಳ ನೋಂದಣಿಯೇ ಹೆಚ್ಚಿತ್ತು ಎಂದರು.
ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಪರವಾನಿಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿತ್ತು. ಹಾಗೆಯೇ ದಸರಾ ಸಂದರ್ಭದಲ್ಲಿ ಬಹಳಷ್ಟು ಕಾರುಗಳು ನೋಂದಣಿಯಾಗಿವೆ. ಆದರೆ, ಕಳೆದ ವರ್ಷದ ದಸರಾಗೆ ಹೋಲಿಸಿದರೆ ಈ ವರ್ಷ ಕಡಿಮೆ. ನಗರದ ಯಶವಂತಪುರ, ಇಂದಿರಾನಗರ, ರಾಜಾಜಿನಗರ, ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿಗಳಲ್ಲಿ ವಾಹನ ನೋಂದಣಿ ಸಂಖ್ಯೆ ಹೆಚ್ಚಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ...ಗೂಳಿಯ ನಾಗಾಲೋಟಕ್ಕೆ ಹಳೆಯ ದಾಖಲೆ ಪುಡಿಪುಡಿ: ಹೊಸ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ!