ಬೆಂಗಳೂರು: ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು, ಕೆಲವು ಸಡಿಲಿಕೆ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
ನಗರದಲ್ಲಿ ಕಠಿಣ ದಿಗ್ಭಂಧನ ಹೇರಿದ್ದಾಗ ಜನಜೀವನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರೂ, ಕೊರೊನಾ ಹರಡುವಿಕೆ ನಿಯಂತ್ರಣದಲ್ಲಿತ್ತು. ಈಗ ನಗರದ 19 ಕಂಟೇನ್ಮೆಂಟ್ ವಾರ್ಡ್ಗಳನ್ನು ಹೊರತುಪಡಿಸಿ ಬಹುತೇಕ ವಾರ್ಡ್ಗಳಲ್ಲಿ ದಿಗ್ಬಂಧನ ಸಡಿಲಿಕೆಗೊಂಡಿದೆ. ನಗರದ ಬೇರೆ ಬೇರೆ ಪ್ರದೇಶಗಳು, ಜನಜೀವನ, ಉದ್ಯಮಗಳ ಮೇಲೆ ಲಾಕ್ಡೌನ್ ಪ್ರಭಾವ ಇದ್ದು, ಅವುಗಳ ಕುರಿತ ಮಾಹಿತಿ ಇಲ್ಲಿದೆ.
ಜನರಲ್ಲಿ ಹೆಚ್ಚಿದ ನೈರ್ಮಲ್ಯ:
ನಗರದಲ್ಲಿ ಇನ್ನೂ ಕೂಡಾ ಕೊರೊನಾ ಅಟ್ಟಹಾಸ ಮುಂದುವರಿದಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಹಾಕಿ ಓಡಾಡುತ್ತಿದ್ದಾರೆ. ಮಾಸ್ಕ್ ಹಾಕದಿದ್ದರೆ ಫೈನ್ ಬೀಳುವ ಭಯದಿಂದಲೂ ಹಲವಾರು ಜನ ಮಾಸ್ಕ್ ಇಲ್ಲದೇ ಹೊರಗೆ ಬರುತ್ತಿಲ್ಲ. ಇನ್ನು ಕಂಪನಿ ಉದ್ಯೋಗದವರು ಸ್ಯಾನಿಟೈಸರ್ ಬಳಸಿ ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅನಿವಾರ್ಯ ಅಲ್ಲದಿದ್ದರೆ ಪ್ರತಿಯೊಬ್ಬರೂ ಮನೆ ಊಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅಂಗಡಿ- ಮುಂಗಟ್ಟುಗಳ ಮುಂಭಾಗವೂ ದೈಹಿಕ ಅಂತರಕ್ಕೆ ಬೇಕಾಗಿ ಮಾರ್ಕ್ ಮಾಡಿದ್ದು, ಅಲ್ಲೇ ನಿಂತು ಜನ ಖರೀದಿ ಮಾಡುತ್ತಿದ್ದಾರೆ. ಇನ್ನು, ಫೇಸ್ ಶೀಲ್ಡ್ ಬಳಸಿ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಕರ್ತವ್ಯ ನಿರ್ವಹಿಸುತ್ತಿದೆ.
ಕಂಟೇನ್ಮೆಂಟ್ ವಲಯಗಳಲ್ಲಿ ಮುಂದುವರಿದ ಕೊರೊನಾ ಕರಿಛಾಯೆ:
ಪಾದರಾಯನಪುರ, ಶಿವಾಜಿನಗರದ ಚಾಂದಿನಿ ಚೌಕ್,ಹೊಂಗಸಂದ್ರ, ಮಂಗಮ್ಮನಪಾಳ್ಯ ಈ ಪ್ರದೇಶದಲ್ಲಿ ಹತ್ತರಿಂದ 45 ರವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ಇರುವುದರಿಂದ ಸಂಪೂರ್ಣವಾಗಿ ಸೀಲ್ಡೌನ್ ಆಗಿವೆ. ಲಾಕ್ಡೌನ್ ಸಡಿಲಿಕೆ ಆದ್ರೂ ಈ ಪ್ರದೇಶಗಳ ರಸ್ತೆಗಳು ಬ್ಯಾರಿಕೇಡ್ ಹಾಕಿ ಮುಚ್ಚಿವೆ. ರಸ್ತೆಗಳನ್ನು ಬ್ಲೀಚಿಂಗ್ ಪೌಡರ್ ಸಿಂಪಡಿಸಿ ನೈರ್ಮಲ್ಯೀಕರಣಗೊಳಿಸಲಾಗಿದೆ. ಮುಚ್ಚಿದ ಅಂಗಡಿ ಮುಂಗಟ್ಟುಗಳು ಇನ್ನೂ ಮುಚ್ಚಿಯೇ ಇವೆ. ಜನರ ಬದುಕು ಇನ್ನೂ ಮನೆಯೊಳಗಡೆ ಇದ್ದು ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿದೆ. ಎರಡು ದಿನಕ್ಕೊಮ್ಮೆ ಕಸ ತೆಗೆಯಲು ಹೋಗುವವರೂ ಪಿಪಿಇ ಕಿಟ್ ಧರಿಸಿ ಹೋಗುತ್ತಾರೆ. ವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ ಕೂಡಾ ಕಾಲಕಾಲಕ್ಕೆ ಹೋಗಿ ಆರೋಗ್ಯ ತಪಾಸಣೆ ನಡೆಸಿ ಬರುತ್ತಿದ್ದಾರೆ. ಪಾದರಾಯನಪುರದಲ್ಲಿ ಜನ ರೈಲ್ವೇ ಹಳಿ ದಾಟಿ, ಬೇರೆ ಪ್ರದೇಶಕ್ಕೆ ತಪ್ಪಿಸಿಕೊಂಡು ಹೋಗಲು ಕೂಡಾ ಮುಂದಾಗಿದ್ದಾರೆ.
ಅಗತ್ಯ ಓಡಾಟಕ್ಕೆ ಸಹಜ ಸ್ಥಿತಿಗೆ ಮರಳಿದ ಸಂಚಾರ ವ್ಯವಸ್ಥೆ:
ಲಾಕ್ಡೌನ್ ಸಡಿಲಿಕೆ ಬಳಿಕ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಸರ್ಕಾರಿ ಬಸ್ ಸೇವೆ ಬೆಳಗ್ಗೆ ಏಳರಿಂದ ಸಂಜೆ ಏಳರವರೆಗೆ ಮಾತ್ರ ಇದ್ದು, ಬಿಎಂಟಿಸಿಯಲ್ಲಿ 25 ಜನ ಹಾಗೂ ಕೆಎಸ್ಆರ್ಟಿಸಿ ಯಲ್ಲಿ 30 ಜನ ಮಾತ್ರ ಪ್ರಯಾಣಿಸಲು ಅವಕಾಶ ಇದೆ. ರೆಡ್ ಝೋನ್ ಮತ್ತು ಕಂಟೇನ್ಮೆಂಟ್ ಝೋನ್ನಲ್ಲಿ ಬಸ್ಗೆ ನಿರ್ಬಂಧ ಹಾಕಲಾಗಿದೆ. ಆದರೆ ಹಲವೆಡೆ ಜನರು ಗುಂಪು ಗುಂಪಾಗಿ ಬಸ್ ಹತ್ತಲು ಸೇರಿದ್ದ ದೃಶ್ಯಗಳು ಕಂಡು ಬಂದಿವೆ. ಇದರ ಜೊತೆಗೆ ಖಾಸಗಿ ಬಸ್ಗಳ ಓಡಾಟಕ್ಕೆ, ಟ್ಯಾಕ್ಸಿ, ಆಟೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಲಾಕ್ಡೌನ್ ನಷ್ಟ ಇನ್ನೂ ಸುಧಾರಿಸಿಲ್ಲ: ಸೇವಿಂಗ್ಸ್ ಎಲ್ಲ ಖಾಲಿ ಖಾಲಿ
ಈ ಕುರಿತಂತೆ ಭಾರತೀಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಜ್ಯೋತಿ ಮಾತನಾಡಿ, ದುಡಿದು ತಿನ್ನುತ್ತಿದ್ದ ಜನರಿಗೆ ಬಹಳಷ್ಟು ತೊಂದರೆ ಆಗಿದೆ. ಬೆಂಗಳೂರಿನ ಜನರಿಗೂ ಸಮಸ್ಯೆ ಆಗಿದೆ. ಅಲ್ಪಸ್ವಲ್ಪ ಉಳಿತಾಯ ಮಾಡಿದ್ದ ಹಣವೂ ಖಾಲಿಯಾಗಿದೆ. ಉದ್ಯೋಗ ಕಳೆದುಕೊಂಡು ಕೆಲವು ಕಡೆ ವೇತನ ಕಡಿತದಿಂದಾಗಿ ಮುಂದೆ ಹೇಗಪ್ಪಾ ಎಂಬ ಆತಂಕ ಶುರುವಾಗಿದೆ. ಕೆಲವು ಕಡೆ ಫ್ಯಾಕ್ಟರಿಗಳು ಮುಚ್ಚಿ ಎರಡು ಮೂರು ತಿಂಗಳ ಸಂಬಳ ಇಲ್ಲದಂತಾಗಿದೆ.
ನಗರದ ಬಾಡಿಗೆ ಮನೆಯವರ ಶೋಷಣೆಯೂ ನಡೆಯುತ್ತಿದೆ. ಕೇವಲ ಒಂದು ದಿನ ರೇಷನ್ ಕೊಟ್ಟರೆ ಪರಿಸ್ಥಿತಿ ಸರಿಹೋಗುವುದಿಲ್ಲ. ಗೂಗಲ್, ಆನ್ಲೈನ್ ಕ್ಲಾಸ್ಗಳನ್ನು ಆರಂಭಿಸಲಾಗುತ್ತಿದೆ. ಜನರಿಗೆ ತಿನ್ನಲು ಅನ್ನ ಇಲ್ಲದ ಗತಿ ಇದ್ದಾಗ ಶಿಕ್ಷಣ ಹೇಗೆ ಪಡೆಯುವುದು. ಕೇಂದ್ರ ಸರ್ಕಾರ ಉಳಿತಾಯದ ಮೇಲಿನ ಬಡ್ಡಿಯನ್ನೂ ಕಡಿಮೆ ಮಾಡಿದೆ. ಸರ್ಕಾರ ಒಂದು ಕಡೆ ಪರಿಹಾರ ಘೋಷಣೆ ಮಾಡಿ ಹಿರಿಯ ನಾಗರಿಕರು ಬ್ಯಾಂಕ್ನಲ್ಲಿ ಇಟ್ಟ ಪಿಂಚಣಿ ಹಣಕ್ಕೆ ಕೊಡುತ್ತಿದ್ದ ಶೇ 9ರಷ್ಟು ಬಡ್ಡಿ ದರವನ್ನು 6.5ಕ್ಕೆ ಇಳಿಸಿದೆ. ಸರ್ಕಾರ ಇನ್ನಾದರೂ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳದೆ ನ್ಯಾಯ ಕೊಡಬೇಕು ಎಂದರು.
ಬಾರ್ ,ಪಬ್, ರೆಸ್ಟೋರೆಂಟ್, ಮಾಲ್ ತೆರೆದಿಲ್ಲ:
ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ವಾಸಿಸುತ್ತಿದ್ದು, ಪಬ್, ಕ್ಲಬ್ಗಳಿಗೆ ಜನರು ಹೋಗುವ ರೂಢಿ ಮಾಡಿಕೊಂಡಿದ್ದಾರೆ. ಆದರೆ ದಿಗ್ಭಂಧನ ಸಂಪೂರ್ಣವಾಗಿ ತೆರವಾಗದ ಕಾರಣ ಇನ್ನೂ ಕೂಡಾ ಸಿನಿಮಾ ಹಾಲ್, ಪಬ್, ಕ್ಲಬ್, ರೆಸ್ಟೋರೆಂಟ್, ಹೋಟೆಲ್ , ಮಾಲ್ ತೆರೆಯಲು ಅನುಮತಿ ಸಿಕ್ಕಿಲ್ಲ. ಸಭೆ, ಸಮಾರಂಭಗಳಿಗೂ ಅನುಮತಿ ಇಲ್ಲ. ಮದುವೆ, ಶುಭ ಕಾರ್ಯಗಳನ್ನು ನಡೆಸಲು ಕೂಡಾ ಐವತ್ತು ಜನರ ಮಿತಿಯಲ್ಲಿ ಹಾಗೂ ಮುನ್ನೆಚ್ಚರಿಕೆಗೊಳೊಂದಿಗೆ ನಡೆಸಲು ತಿಳಿಸಿದೆ.