ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವೇಳೆ ನೀರಾವರಿ ಸಚಿವರಾಗಿದ್ದ ಎಂ. ಬಿ. ಪಾಟೀಲ್ ಮತ್ತು ಡಿ. ಕೆ. ಶಿವಕುಮಾರ್ ನಡುವೆ ಮೇಕೆದಾಟು ಯೋಜನೆ ಟೆಂಡರ್ ನ ಕಮಿಷನ್ ಹಂಚಿಕೆ ಜಗಳದಿಂದಾಗಿ ಯೋಜನೆ ವಿಳಂಬವಾಯಿತೇ ಹೊರತು ಬಿಜೆಪಿ ಸರ್ಕಾರ ಇದಕ್ಕೆ ಕಾರಣವಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2013 ರಿಂದ 2018 ರವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ ನ್ಯಾಯಾಲಯದ ಯಾವುದೇ ಅಡೆತಡೆ ಇರಲಿಲ್ಲ. ಆ ಸಂದರ್ಭದಲ್ಲಿ ಡಿಪಿಆರ್ ಮಾಡಿ ಈ ಕಾರ್ಯವನ್ನು ಜಾರಿ ಮಾಡಬಹುದಾಗಿತ್ತು. ಯಾಕೆ ಮಾಡಲಿಲ್ಲ? ವಿಳಂಬಕ್ಕೆ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಅವರೇ ಕಾರಣ ಎಂದು ದೂರಿದರು.
ಕಾಂಗ್ರೆಸ್ ವಲಯದಲ್ಲಿಯೇ ಇದು ಚರ್ಚೆ ನಡೆಯುತ್ತಿದೆ. ಟೆಂಡರ್ ಕರೆಯುವ ವಿಷಯ ಡಿಪಿಆರ್ ಮಾಡಿದಾಗ ₹5,912 ಕೋಟಿಗೆ ಮಾಡುತ್ತಾರೆ ನಂತರ ಅದನ್ನು ₹9,000 ಕೋಟಿಗೆ ಹೆಚ್ಚು ಮಾಡುತ್ತಾರೆ. ಹೀಗೆ ಹೆಚ್ಚು ಮಾಡಿದ ಸಂದರ್ಭದಲ್ಲಿ ಎಂ ಬಿ ಪಾಟೀಲ್ ಮತ್ತು ಡಿ ಕೆ ಶಿವಕುಮಾರ್ ನಡುವೆ ಕಮಿಷನ್ ವಿಚಾರದಲ್ಲಿ ಒಪ್ಪಂದ ಆಗುವುದಿಲ್ಲ. ಕಮಿಷನ್ ಹಂಚಿಕೆ ವಿಚಾರದಲ್ಲಿ ಎಂ ಬಿ ಪಾಟೀಲ್, ಡಿ ಕೆ ಶಿವಕುಮಾರ್ ನಡುವೆ ಜಗಳ ಆಗಿದ್ದರಿಂದ ಕಮಿಷನ್ ಗಲಾಟೆಯಿಂದಾಗಿ ಯೋಜನೆ ವಿಳಂಬವಾಯಿತು ಎಂದಿದ್ದಾರೆ.
ಈಗ ಎಂ ಬಿ ಪಾಟೀಲ್ ಅವರು ನಮ್ಮ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ಏಕವಚನದಲ್ಲಿ ದೂರುತ್ತಿದ್ದಾರೆ. ಗೋವಿಂದ ಕಾರಜೋಳ ಹಿಂದುಳಿದ ವರ್ಗದ ದಲಿತ ನಾಯಕ ಅವರನ್ನು ಮೂರ್ಖ ಎಂದು ಕರೆಯುತ್ತಿದ್ದಾರೆ. ನಾನು ಎಂ ಬಿ ಪಾಟೀಲ್ ಅವರಿಗೆ ಆ ಭಾಷೆಯಲ್ಲಿ ಕರೆಯುವುದಿಲ್ಲ, ಆ ಸಮುದಾಯಕ್ಕೆ ನೀವು ಅನ್ಯಾಯ ಮಾಡಿದಿರಿ. ಕೂಡಲೇ ಕಾರಜೋಳ ಅವರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಯುಪಿ ಚುನಾವಣೆಗೆ ಕಾಂಗ್ರೆಸ್ ರೆಡಿ: ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ಸೇರಿ ಶೇ.40ರಷ್ಟು ಮಹಿಳೆಯರಿಗೆ ಟಿಕೆಟ್
ಡಿಕೆಶಿಗೆ ಕಾಮನ್ ಸೆನ್ಸ್ ಇಲ್ಲ:
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಹೆಚ್ಚಾಗುತ್ತಿದೆ, ಈ ಸಂದರ್ಭದಲ್ಲಿ ಪಾದಯಾತ್ರೆ ಅಗತ್ಯವಿಲ್ಲ. ಪಾದಯಾತ್ರೆ ಮಾಡಬೇಡಿ ಎಂದು ಹೈಕೋರ್ಟ್ ಹೇಳಿದೆ. ಈ ಪಾದಯಾತ್ರೆ ನಿಲ್ಲಿಸಲು ಸಾಧ್ಯವಿಲ್ಲವೇ ಎಂದು ಸರ್ಕಾರವನ್ನೂ ಕೇಳಿದೆ, ಸರ್ಕಾರ ಮೊದಲಿನಿಂದಲೂ ಪಾದಯಾತ್ರೆ ಬೇಡ ಎಂದು ಹೇಳುತ್ತಲೇ ಬರುತ್ತಿದೆ. ಆದರೆ, ಮುಖ್ಯಮಂತ್ರಿ ಕುರ್ಚಿಯ ಸ್ಪರ್ಧೆಯಲ್ಲಿ ನಾ ಮುಂದೆ, ತಾ ಮುಂದೆ ಎಂದು ಕೈ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ. ಕೊರೊನಾ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ನವರಿಗೆ ಕಾಮನ್ ಸೆನ್ಸ್ ಇಲ್ಲ, ಡಿ ಕೆ ಶಿವಕುಮಾರ್ ಗೆ ಕಾಮನ್ ಸೆನ್ಸ್ ಎನ್ನುವ ಗುಲಗಂಜಿಯೂ ಇಲ್ಲ. ಮಾನವೀಯತೆಯ ಲವಲೇಶವೂ ಇಲ್ಲದೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರವಿಕುಮಾರ್ ಹರಿಹಾಯ್ದರು.
ಪಾದಯಾತ್ರೆಯಲ್ಲಿ ಭಾಗವಹಿಸಿರುವ ಅನೇಕ ಹಿರಿಯ ನಾಯಕರಿಗೂ ಕೊರೊನಾ ಬಂದಿದೆ. ಈಗಿರುವ ಮಾಹಿತಿ ಪ್ರಕಾರ ರಾಮನಗರದಲ್ಲಿ ಪ್ರತಿ ನೂರು ಜನಕ್ಕೆ ಪರೀಕ್ಷೆ ಮಾಡಿದರೆ 30 ಜನಕ್ಕೆ ಕೊರೊನಾ ದೃಢಪಡುತ್ತದೆ. ಇದು ಇನ್ನೂ ಹೆಚ್ಚಾಗಲಿದೆ. ಹಾಗಾಗಿ ಇದು ಪಾದಯಾತ್ರೆಯಲ್ಲ, ಕೊರೊನಾ ಹೆಚ್ಚು ಮಾಡುವ ಜಾತ್ರೆ, ಹೈಕಮಾಂಡ್ಗೆ ಇದೆಲ್ಲ ಗೊತ್ತಿದೆ. ಹೈಕಮಾಂಡ್ ಗಮನಕ್ಕೆ ತಂದೇ ಇವರು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ಕರ್ನಾಟಕ ರಾಜ್ಯದ ಪ್ರಭಾರಿ ಸುರ್ಜೇವಾಲಾ ಇಂದು ಸೂಚನೆ ಕೊಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿದರೆ ಪಾದಯಾತ್ರೆ ನಿಲ್ಲಿಸಿ ಎನ್ನುತ್ತಿದ್ದಾರೆ, ಇನ್ನು ಎಷ್ಟು ಪರಿಸ್ಥಿತಿ ಕೈಮೀರಬೇಕು? ಕರ್ನಾಟಕದಲ್ಲಿ ಕೊರೊನಾ ಹೆಚ್ಚಾಗುವಲ್ಲಿ ಕಾಂಗ್ರೆಸ್ ಪಾತ್ರ ಬಹಳ ದೊಡ್ಡದಿದೆ. ಆ ಪಕ್ಷದ ಹೈಕಮಾಂಡ್ ಪಾತ್ರವೂ ದೊಡ್ಡದಿದೆ. ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು, ಅವರ ಬೇಳೆಯನ್ನು ಬೇಯಿಸಲು ಹೈಕಮಾಂಡ್ ಕೂಡ ಕೋವಿಡ್ ಹೆಚ್ಚು ಮಾಡಲು ಸಹಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವವರು, ಹಿರಿಯ ರಾಜಕಾರಣಿ, ಸಂವಿಧಾನದ ಬಗ್ಗೆ ಬಹಳ ಮಾತನಾಡುವ ಸಿದ್ದರಾಮಯ್ಯ ಈ ಹೋರಾಟಕ್ಕೆ ಅನುಮತಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ. ನೀವು ಮುಖ್ಯಮಂತ್ರಿಯಾದಾಗ ನಡೆದ ಪ್ರತಿಭಟನೆಗಳಿಗೆ ಅನುಮತಿ ಕೊಟ್ಟಿರಲಿಲ್ಲವೇ?ಪ್ರತಿಭಟನೆಗಳಿಗೆ ಅನುಮತಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರಲಲ್ಲವೇ? ತನಗೊಂದು ಕಾನೂನು ಬೇರೆಯವರಿಗೆ ಒಂದು ಕಾನೂನು ಎಂದು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಸಾಮಾನ್ಯ ಜನರ ಪ್ರಾಣವನ್ನು ಬಲಿಕೊಡುವ ಇವರ ಧೋರಣೆಯನ್ನು ಬಿಜೆಪಿ ಖಂಡಿಸಲಿದೆ ಎಂದರು.