ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ ಪರಿಣಾಮ ಗರ್ಭ ಧರಿಸಿರುವ ಅಪ್ರಾಪ್ತೆ ತನ್ನೊಳಗಿರುವ ಅನಪೇಕ್ಷಿತ ಭ್ರೂಣವನ್ನು ತೆಗೆಸಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕಾರವಾರ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಿಗೆ ನಿರ್ದೇಶಿಸಿದೆ.
ಈ ಕುರಿತು ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಗರ್ಭ ತೆಗೆಯುವ ವಿಚಾರವಾಗಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಗರ್ಭಪಾತ ಮಾಡುವುದರಿಂದ ಸಂತ್ರಸ್ತೆಗೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಯಾವುದಾದರೂ ತೊಂದರೆ ಆಗಲಿದೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಈ ವೈದ್ಯಕೀಯ ಪರೀಕ್ಷೆ ನಡೆಸಲು ವಿವಿಧ ತಜ್ಞರನ್ನು ಒಳಗೊಂಡ ವೈದ್ಯರ ತಂಡ ರಚಿಸಬೇಕು ಎಂದು ಕಾರವಾರ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದೆ.
ಅಲ್ಲದೆ ಸಂತ್ರಸ್ತೆಯು ಮೇ 14ರಂದು ಬೆಳಗ್ಗೆ 11 ಗಂಟೆಗೆ ಅಧೀಕ್ಷಕರ ಎದುರು ಹಾಜರಾಗಬೇಕು. ನಿಯೋಜಿತ ವೈದ್ಯಕೀಯ ತಂಡ ಗರ್ಭಪಾತ ತಿದ್ದುಪಡಿ ವಿಧೇಯಕ-2020ರ ಅನ್ವಯ ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸಬೇಕು. ಅತ್ಯಾಚಾರದಿಂದ ಅನುಭವಿಸಿದ ಮಾನಸಿಕ ಆಘಾತಕ್ಕಾಗಿ ಸಂತ್ರಸ್ತೆಗೆ ಕರ್ನಾಟಕ ಸಂಯೋಜಿತ ಮಕ್ಕಳ ಸಂರಕ್ಷಣಾ ಸೊಸೈಟಿ ಕೂಡಲೇ 25 ಸಾವಿರ ರೂಪಾಯಿ ಹಣವನ್ನು ಡಿಡಿ ಮೂಲಕ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದಿದೆ.
ಸದ್ಯ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಸಂತ್ರಸ್ತೆ ಹಾಗೂ ಆಕೆಯ ತಾಯಿ ತಮ್ಮ ಊರಿನಿಂದ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸುಗಮವಾಗಿ ಹೋಗಿ ಬರಲು ಅನುಕೂಲವಾಗುವಂತೆ ಅಗತ್ಯ ಪಾಸ್, ಆ್ಯಂಬುಲೆನ್ಸ್ ಅಥವಾ ಟ್ಯಾಕಿ ಸೌಲಭ್ಯಗಳನ್ನು ಗೋಕರ್ಣ ಠಾಣೆ ಪೊಲೀಸರು ಕಲ್ಪಿಸಿಕೊಡಬೇಕು. ಸಂಸತ್ರಸ್ತೆಯ ವೈದ್ಯಕೀಯ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಮೇ 19ರ ಒಳಗೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.