ಬೆಂಗಳೂರು: ಡ್ರಾಪ್ ಕೇಳಿದ ಸೇಲ್ಸ್ ಗರ್ಲ್ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಕೋಟೆ ತಾಲೂಕಿನ ಗಂಗಾಪುರ ನಿವಾಸಿ ರಮೇಶ್ (40) ಬಂಧಿತ ಆರೋಪಿ. ನಿನ್ನೆ ಸಂಜೆ ಬೈಲನರಸಾಪುರದಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡಲು ಬಂದಿದ್ದ ಯುವತಿ ಸಂಜೆಯಾಗಿದ್ದರಿಂದ ಮರಳಿ ಮನೆಗೆ ಹೊರಡಲು ಸಿದ್ಧವಾಗಿದ್ದಳು. ಬಸ್ ಬಾರದ ಕಾರಣ ಬೈಕ್ನಲ್ಲಿ ಬರುತ್ತಿದ್ದ ರಮೇಶ್ ಬಳಿ ಡ್ರಾಪ್ ಕೇಳಿದ್ದಾಳೆ. ಶಾರ್ಟ್ ಕಟ್ ರಸ್ತೆಯಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿದ ಆಸಾಮಿ, ತೋಟವೊಂದರ ಪಂಪ್ ಹೌಸ್ ಬಳಿ ಕರೆದುಕೊಂಡು ಹೋಗಿ ಕುತ್ತಿಗೆ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಲು ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.
ರಮೇಶ್ನಿಂದ ತಪ್ಪಿಸಿಕೊಂಡ ಯುವತಿ ಗ್ರಾಮದ ಕಡೆ ಓಡಿ ಬಂದು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ, ನಂತರ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರಮೇಶ್ನನ್ನ ಬಂಧಿಸಿ, ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಹೊಟ್ಟೆ ಪಾಡಿಗೆ ಊರು, ಮನೆ, ಮಠ ಬಿಟ್ಟು ಬಿಸಿಲಿನಲ್ಲಿ ಕಷ್ಟ ಪಟ್ಟು ದುಡಿಯುವ ಹೆಣ್ಣುಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.