ಬೆಂಗಳೂರು: ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಭರವಸೆ ಮಾತುಗಳನ್ನಾಡಿದ್ದಾರೆ.
ನಗರದ ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇದು ನಮ್ಮ ವಿಶ್ವಾಸವಲ್ಲ, ಜನತೆಯ ವಿಶ್ವಾಸ. ರೈತರು, ದಲಿತರು, ಅಲ್ಪಸಂಖ್ಯಾತರು ನಮ್ಮ ಪರವಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅವರು ನಿಂತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ನಗರದ ಉಸ್ತುವಾರಿಗಾಗಿ ಇಬ್ಬರು ಮಂತ್ರಿಗಳು ಕಿತ್ತಾಡ್ತಿದ್ದಾರೆ. ಇವರಿಂದ ಟ್ರಾಫಿಕ್ ಸಮಸ್ಯೆ ಸರಿಪಡಿಸೋಕೆ ಆಗ್ತಿಲ್ಲ. ಹಣದಿಂದ ಮತ ಖರೀದಿಗೆ ಹೊರಟಿದ್ದಾರೆ. ನಮ್ಮ ಅಭ್ಯರ್ಥಿಗಳಿಬ್ಬರು ಬಹಳ ಒಳ್ಳೆಯವರಿದ್ದಾರೆ. ಮಸ್ಕಿಯಲ್ಲಿ ಗೆದ್ದಂತೆ ಇಲ್ಲೂ ನಾವೇ ಗೆಲ್ತೇವೆ. ಬಿಜೆಪಿಯ ಗರ್ವವನ್ನ ಮತದಾರರು ಮುರಿಯಲಿದ್ದಾರೆ. ಕಪಟ, ಹಣ, ತೋಳ್ಬಲದಿಂದ ಗೆಲ್ಲೋಕೆ ಹೊರಟಿದ್ದಾರೆ ಎಂದು ಆರೋಪಿಸಿದರು.
ಆರ್ಎಸ್ಎಸ್ ಬಗ್ಗೆ ಜೆಡಿಎಸ್ ಆರೋಪ ವಿಚಾರ ಮಾತನಾಡಿ, ಅದರ ಬಗ್ಗೆ ವಿಶ್ವವೇ ನೋಡ್ತಿದೆ. ನಾನೇನು ಹೆಚ್ಚು ಮಾತನಾಡುವುದಿಲ್ಲ. ಪೆಟ್ರೋಲ್, ಗ್ಯಾಸ್ ರೇಟ್ ಹೆಚ್ಚಳವಾಗಿದೆ. ಅಡುಗೆ ಎಣ್ಣೆ 200 ರೂ ಆಗಿದೆ. ಅಂಗನವಾಡಿ ಮಕ್ಕಳಿಗೆ ಆಹಾರ ಸಿಗ್ತಿಲ್ಲ. ಇವರ ಅಧಿಕಾರದಲ್ಲಿ ಎಲ್ಲವೂ ಮಿಸ್ ಆಗ್ತಿದೆ. ಜನರ ವಿರುದ್ಧದ ಧೋರಣೆ ಬಿಜೆಪಿಯದ್ದಾಗಿದೆ.
ಬಿಜೆಪಿ ಷಡ್ಯಂತ್ರವನ್ನು ಇಡೀ ಪ್ರಪಂಚ ನೋಡ್ತಿದೆ. ವಾಹನ ಸವಾರರು ಪೆಟ್ರೋಲ್ ಕೊಳ್ಳೋಕೆ ಆಗ್ತಿಲ್ಲ. ಸಿಲಿಂಡರ್ ಕೊಳ್ಳಲಾಗದೇ ಮಹಿಳೆಯರು ಒದ್ದಾಡ್ತಿದ್ದಾರೆ. ಜನ ಇವತ್ತು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದರು.
![Randeep surjewala statement on byelection2021](https://etvbharatimages.akamaized.net/etvbharat/prod-images/kn-bng-02-surgevala-talk-script-7208077_25102021162742_2510f_1635159462_137.jpg)
ಖರ್ಗೆ ಮೊಮ್ಮಗಳ ವಿವಾಹದಲ್ಲಿ ಭಾಗಿ: ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರು ಈಶ್ವರ್ ಖಂಡ್ರೆ ಜೊತೆ ಸಭೆ ನಡೆಸಿದ ಬಳಿಕ ಡಿಕೆಶಿ ಅವರೊಂದಿಗೆ ಬೆಂಗಳೂರು ಅರಮನೆಯಲ್ಲಿ ನಡೆದ ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳು ಪ್ರಾರ್ಥನಾ ಮತ್ತು ಪಾಣಿನಿ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.