ಬೆಂಗಳೂರು: ರಾಜ್ಯದ ಜಲ ಸಮಸ್ಯೆಗಳ ಕುರಿತು ಕಾಂಗ್ರೆಸ್ ಹೋರಾಟ ಆರಂಭಿಸಲು ನಿರ್ಧರಿಸಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಕೃಷ್ಣಾ ನದಿ ನೀರು ವಿಚಾರವಾಗಿ ಎದ್ದಿರುವ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಡಿ.30ರಂದು ವಿಜಯಪುರದಲ್ಲಿ ಬೃಹತ್ ಸಭೆ ಹಾಗೂ ರ್ಯಾಲಿ ನಡೆಸುತ್ತೇವೆ ಎಂದರು.
ಜನವರಿ 2ರಂದು ಹುಬ್ಬಳ್ಳಿಯಲ್ಲಿ ಸಹ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಸ್ಸಿ,ಎಸ್ಟಿ ಸಮುದಾಯದವರಿಗೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಯಾವ ರೀತಿ ಅನ್ಯಾಯ ಎಸಗಲು ಮುಂದಾಗಿದೆ ಎನ್ನುವುದನ್ನು ವಿವರಿಸಲು ಜ.8 ರಂದು ಚಿತ್ರದುರ್ಗದಲ್ಲಿ ಬೃಹತ್ ರ್ಯಾಲಿ ಹಾಗೂ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಂಡಿದ್ದು ದಿನಾಂಕವನ್ನು ಶೀಘ್ರವೇ ತಿಳಿಸುತ್ತೇವೆ ಎಂದು ಹೇಳಿದರು.
ಜನವರಿ ಮೊದಲ ವಾರದಲ್ಲಿ ಒಂದು ಜಂಟಿ ಯಾತ್ರೆ ಆರಂಭಿಸಲಿದ್ದು ಎಲ್ಲಾ ಜಿಲ್ಲಾ ಕೇಂದ್ರದ ಮೂಲಕ 224 ವಿಧಾನಸಭೆ ಕ್ಷೇತ್ರದಲ್ಲಿ ಸಂಚರಿಸಲಿದ್ದೇವೆ. 45-50 ದಿನ ಯಾತ್ರೆ ಸಾಗಲಿದೆ. ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಮುಂದೆ ಮಾಹಿತಿ ನೀಡುತ್ತಾರೆ. ಮುಂದಿನ 75 ದಿನ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದ ನಾಗರಿಕರಿಗೆ ಇಲ್ಲಿನ ಭ್ರಷ್ಟಾಚಾರ ಹಾಗೂ ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎನ್ನುವುದನ್ನು ವಿವರಿಸುವ ಕಾರ್ಯ ಮಾಡಲಿದ್ದೇವೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಸಂಬಂಧ ಇಂದು ಮಹತ್ವದ ಸಭೆ ನಡೆಸಿದ್ದೇವೆ. ಜನರ ದನಿಯನ್ನು ರಾಜ್ಯದ 40 ಪರ್ಸಂಟ್ ಸರ್ಕಾರದ ವಿರುದ್ಧ ಎತ್ತುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವ ಕಾರ್ಯ ಮಾಡಲು ನಿರ್ಧರಿಸಿದ್ದೇವೆ. ಇದು ಮುಂದಿನ 75 ದಿನ ನಡೆಯಲಿದೆ ಎಂದರು.
ಚಳಿಗಾಲದ ಅಧಿವೇಶನ ಸಂದರ್ಭ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ. ಇದಕ್ಕೆ ವಿಜಯಪುರ ಸೇರಿದಂತೆ ಸುತ್ತಲಿನ ಜಿಲ್ಲೆಯ ಜನ, ರೈತರು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರಗತಿಗೆ ರಾಜ್ಯದಲ್ಲಿ ಕಾಂಗ್ರೆಸ್ ಯಾವ ರೀತಿಯ ಕಾರ್ಯಕ್ರಮ ನೀಡಲಿದೆ ಎನ್ನುವ ವಿವರವನ್ನೂ ನಾವು ಒದಗಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಹೆಚ್ಕೆಪಿ, ಜಾರ್ಜ್, ಸಲೀಂ, ಧ್ರುವನಾರಾಯಣ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಡಿ.ಕೆ.ಸುರೇಶ್ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಮಾಸ್ ಲೀಡರ್ ಕೊರತೆ: ಬಿಎಸ್‌ವೈ ಇಮೇಜ್‌ಗೆ ಹೈಕಮಾಂಡ್ ಜೈ?