ಬೆಂಗಳೂರು : ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ ಅದೆಲ್ಲಿದ್ದಾರೋ, ಏನು ಮಾಡುತ್ತಿದ್ದಾರೋ ಯಾರಿಗೂ ಗೊತ್ತಿಲ್ಲ. ಸಿನಿಮಾ ಮತ್ತು ರಾಜಕೀಯದಿಂದ ದೂರವಾಗಿರುವ ರಮ್ಯಾ, ಅಜ್ಞಾತ ಸ್ಥಳದಿಂದ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುವುದು ಬಿಟ್ಟರೆ, ಅವರ ಬಗ್ಗೆ ಯಾರಿಗೂ ತಿಳಿದಿಲ್ಲ.
ಇದೀಗ, ಅವರು ತಾವು ಹಿಂದೊಮ್ಮೆ ಮಾಡಿದ ದೊಡ್ಡ ತಪ್ಪಿನ ಬಗ್ಗೆ ಬರೆದುಕೊಂಡಿದ್ದಾರೆ. ಅದರಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅದೆಷ್ಟು ಮುಜುಗರ ಅನುಭವಿಸಬೇಕಾಗಿತ್ತು ಅನ್ನೋದನ್ನೂ ಅವರು ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ರಮ್ಯಾ ಸರಣಿ ಪೋಸ್ಟ್ಗಳನ್ನು ಹಾಕಿದ್ದಾರೆ. ತಮ್ಮಿಂದ ಅದೆಂತಹ ಪ್ರಮಾದವಾಯಿತು ಮತ್ತು ಅಷ್ಟಾದರೂ ರಾಹುಲ್ ಗಾಂಧಿ ಅದನ್ನೆಲ್ಲ ಕ್ಷಮಿಸಿ ಹೇಗೆ ಔದಾರ್ಯತೆಯನ್ನು ಮೆರೆದರು ಎಂದು ಮೆಚ್ಚಿಕೊಂಡಿದ್ದಾರೆ.
ಈ ಘಟನೆ ನಡೆದಿದ್ದು ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದ ಸಮಯದಲ್ಲಿ. ಆಗ ಪಕ್ಷದ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಮತ್ತು ಇತರ ಸಂಸದರ ನಿಯೋಗದ ಜೊತೆಗೆ ರಮ್ಯಾ ಸಹ ಜರ್ಮನಿಗೆ ಹೋಗಿದ್ದರಂತೆ. ಬರ್ಲಿನ್ನಲ್ಲಿದ್ದ ಮ್ಯೂಸಿಯಂಗೆ ನಾಯಕರೆಲ್ಲರು ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಲ್ಲಿನ ಕೆಲವು ಸಂಸದರು ರಾಹುಲ್ ಅವರನ್ನು ಕರೆದುಕೊಂಡು ಹೋಗಿ ಮ್ಯೂಸಿಯಂನ ವಿಶೇಷತೆಗಳನ್ನು ತೋರಿಸುತ್ತಿದ್ದರಂತೆ.
ಆಗ ರಮ್ಯಾ, ರಾಹುಲ್ ಅವರ ವಿವಿಧ ಭಂಗಿಯ ಫೋಟೋಗಳನ್ನು ತೆಗೆಸಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕೆ ಕಳಿಸಿದರಂತೆ. ಅದರಂತೆ ರಾಹುಲ್ ಗಾಂಧಿಯ ಹಲವು ಮುಖಗಳು ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಆದರೆ, ಈ ವಿಷಯವನ್ನು ಸಾಕಷ್ಟು ಟ್ರೋಲ್ ಮಾಡಲಾಯಿತಂತೆ. ಅದರಿಂದ ರಾಹುಲ್ ಗಾಂಧಿ ಸಾಕಷ್ಟು ಮುಜುಗರ ಎದುರಿಸಬೇಕಾಯಿತು. ಇದರಿಂದ ಬೇಸರಗೊಂಡ ರಮ್ಯಾ, ನಾನು ದೊಡ್ಡ ತಪ್ಪು ಮಾಡಿದ್ದೇನೆ. ನಾನು ಸೋಶಿಯಲ್ ಮೀಡಿಯಾ ಹೆಡ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಹುಲ್ ಬಳಿ ಹೇಳಿದ್ದಾರೆ. ಆದರೆ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದ ರಾಹುಲ್, ನಗುತ್ತಲೇ ಇಟ್ಸ್ ಓಕೆ, ಮುಂದಿನ ಸಲ ಪೋಸ್ಟ್ ಮಾಡುವಾಗ ಕೇರ್ಫುಲ್ ಆಗಿರುವಂತೆ ಹೇಳಿ ಕಳುಹಿಸಿದ್ರಂತೆ.
ಈ ಕುರಿತು ಬರೆದುಕೊಂಡಿರುವ ಅವರು, ಆ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ, ನನ್ನ ಮೇಲೆ ಕೋಪಗೊಂಡು ರಾಜೀನಾಮೆ ಕೊಡುವಂತೆ ಹೇಳುತ್ತಿದ್ದರು. ಆದರೆ, ರಾಹುಲ್ ಗಾಂಧಿ ಅವರ ಮನಸ್ಸು ದೊಡ್ಡದು. ನಾನು ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದಾಗ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ವಿಶಾಲ ಹೃದಯ, ಸಹಾನುಭೂತಿ, ಕ್ಷಮಿಸುವ ಗುಣ, ದೂರದೃಷ್ಟಿ ಇವೆಲ್ಲದರಿಂದ ಸಾಕಷ್ಟು ಪ್ರಭಾವಿತಳಾಗಿದ್ದೇನೆ. ಅವರ ಬಗ್ಗೆ ಯಾವುದೇ ಸುಳ್ಳು ಸುದ್ದಿ ಹರಿದಾಡಿದರೂ ನಾನು ನಂಬುವುದಿಲ್ಲ ಎಂದು ರಮ್ಯಾ ಹೇಳಿಕೊಂಡಿದ್ದಾರೆ.