ಬೆಂಗಳೂರು: ಇಂದು ಬಿಎಸ್ವೈ ಬಹುಮತ ಸಾಬೀತುಪಡಿಸುವ ಮೂಲಕ ಅನೇಕ ದಿನಗಳಿಂದ ತಲೆದೋರಿದ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆದಿದ್ದಾರೆ. ಈ ಮಧ್ಯೆ ತಮ್ಮ ಬದ್ದತೆಗೆ ಅನುಗುಣವಾಗಿ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹಬ್ಬಿದ್ದ ಊಹಾಪೋಹಾಗಳಿಗೆ ಅಂತ್ಯ ಹಾಡಿದ್ದಾರೆ.
ಸದನದಲ್ಲಿ ರಮೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಅವರು, ನಾನು ಸರ್ವಾನುಮತದಿಂದ ಸ್ಪೀಕರ್ ಆಗಿ ಆಯ್ಕೆಯಾಗಿದ್ದೇನೆ. ಕಳೆದ 14 ತಿಂಗಳು ಕಾಲ ಸಭಾಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಾನು ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನಾವು ಅಲಂಕರಿಸಿದ ಸ್ಥಾನದೊಡ್ಡದು. ಸ್ಥಾನಕ್ಕೆ ಅಪಪ್ರಚಾರ ಆಗದಂತೆ ಕೆಲಸ ಮಾಡಿದ್ದೇನೆ. ಸ್ಥಾನದ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ಚುನಾಚಣಾ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು. ನಾವು ಈ ಸಂಬಂಧ ಕೇಂದ್ರಕ್ಕೆ ಒತ್ತಡ ಹೇರಬೇಕು. ಕೆಲ ಬೆಳವಣಿಗೆಯಿಂದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ಅನರ್ಹತೆ ಸಂಬಂಧ ತೀರ್ಪು ನೀಡುವ ಮೂಲಕ ನಾನು ಯಾವ ಇತಿಹಾಸವನ್ನೂ ಸೃಷ್ಠಿಸಿಲ್ಲ. ಆ ವಿಚಾರವಾಗಿ ನಾನು ಯಾರ ಒತ್ತಡ ಕ್ಕೂ ಮಣಿದಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಕರ್ತವ್ಯ ನಿಭಾಯಿಸಿದ್ದೇನೆ ಎಂದು ವಿವರಿಸಿದರು.
ಅನರ್ಹತೆಯ ನಿಯಮ 10ನೇ ಶೆಡ್ಯೂಲ್ ನಿಂದ ಬಯಸಿದಷ್ಟು ಉದ್ದೇಶ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲಿ ಸಾಕಷ್ಟು ನ್ಯೂನ್ಯತೆ ಇದೆ. ಸಂಸದೀಯ ಪ್ರಜಾಪ್ರಭುತ್ವ ಉಳಿಯುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡಬೇಕು. ಜನಪ್ರತಿನಿಧಿ ಕಾಯ್ದೆಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಅದನ್ನು ಸರಿಪಡಿಸಲು ಶ್ರಮ ವಹಿಸಬೇಕು ಎಂದು ತಿಳಿಸಿದರು.
ನೀವು ಎಷ್ಟೇ ಒಳ್ಳೆಯವರಿದ್ದರೂ, ನಿಮ್ಮ ಸುತ್ತ ಇರುವವರನ್ನು ನಂಬಲು ಹೋಗಬೇಡಿ.ಅವರು ಸಿಎಂ ಕುರ್ಚಿಯ ವಿಶ್ವಾಸಿಗಳಾಗಿದ್ದಾರೆ ಅಷ್ಟೇ. ಅವರನ್ನು ನಂಬುವ ತಪ್ಪು ಮಾಡಬೇಡಿ ಎಂದು ಸಿಎಂಗೆ ಇದೇ ವೇಳೆ ರಮೇಶ್ ಕುಮಾರ್ ಸಲಹೆ ನೀಡಿದರು.