ಬೆಂಗಳೂರು: ಅನರ್ಹ ಶಾಸಕರು ಇಲಿ ಓಡಿ ಹೋಗೋ ಹಾಗೆ ಓಡಿ ಹೋದರು. ತಮ್ಮ ಲಾಭಕ್ಕಾಗಿ ಜಾಗ ಹುಡುಕಿಕೊಳ್ಳೋಕೆ ಬಿಜೆಪಿಯ ಕಾಲು ಹಿಡಿದರು. ಆದರೆ, ರಮೇಶ್ ಕುಮಾರ್ ಶಾಸಕರನ್ನ ಅನರ್ಹಗೊಳಿಸಿ, ಗಂಡಸು ಮಾಡೋ ಕೆಲಸ ಮಾಡಿ ತಕ್ಕ ಪಾಠ ಕಲಿಸಿದ್ದಾರೆ ಅಂತಾ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹೇಳಿದ್ದಾರೆ.
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ 'ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ' ವರ್ತಮಾನದ ಇತಿಹಾಸ ಎಂಬ ಗ್ರಂಥ ಲೋಕಾರ್ಪಣೆ ಮಾಡಿ ಮಾತಾನಾಡಿದ ಅವರು, ಅನರ್ಹ ಶಾಸಕರ ವಿಚಾರವಾಗಿ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಕೆಲಸಕ್ಕೆ ಸೈ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಇನ್ಮುಂದೆ ಹೊಸ ಸರ್ಕಾರ ರಚನೆ ಮಾಡೋದಾದರೆ ಒಳ್ಳೆಯ ರೀತಿಯಲ್ಲಿ ಮಾತುಕತೆ ನಡೆಸಿ ಸರ್ಕಾರ ರಚನೆ ಮಾಡಲಿ ಅಂತಾ ಸಲಹೆ ನೀಡಿದರು. ಬಿಜೆಪಿಯವರು ಗೋವಾದಲ್ಲೂ ಕಾಂಗ್ರೆಸ್ ಉಳಿಸಲಿಲ್ಲ. ಕರ್ನಾಟಕದಲ್ಲೂ ಫಜೀತಿ ಮಾಡಿ ಬಿಟ್ಟಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು.
ಲಿಂಗಾಯತರನ್ನ ಒಡೆದು, ಒಕ್ಕಲಿಗರನ್ನೂ ತುಳಿಯುವ ಮೂಲಕ ಪ್ರಜಾಪ್ರಭುತ್ವದಲ್ಲಿ ಪರಮಾಧಿಕಾರಿ ಆಗೋಕೆ ಪ್ರಧಾನಿ ಮುಂದಾಗಿದ್ದಾರೆ. ಯಡಿಯೂರಪ್ಪ ಸ್ವತಂತ್ರ ಇಲ್ಲ. ನೀವು ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಕೇಂದ್ರ ನಾಯಕರು ಸರಿಯಾದ ನೀತಿ ಅನುಸರಿಸಲಿಲ್ಲ ಎಂದರು.
ಜಾತಿ ನೋಡಿ ಟಿಕೆಟ್ ಕೊಡುವುದು ಬಿಡಿ:
ಡಿಕೆಶಿ ಬಂಧನ ಆದಾಗ ಒಕ್ಕಲಿಗರು ಬೀದಿಗೆ ಬಂದರು. ಪ್ರಜಾಪ್ರಭುತ್ವ ಉಳಿಸಕ್ಕೆ ಈ ರೀತಿ ಬೀದಿಗೆ ಬರಲ್ಲ. ಮೋದಿ ಆರ್ಭಟಕ್ಕೆ ಬ್ರೇಕ್ ಹಾಕಬೇಕು. ಇಲ್ಲವಾದಲ್ಲಿ ಮೂರು ಪಕ್ಷಗಳ ನಾಯಕರಿಗೆ ಉಳಿಗಾಲವಿಲ್ಲ. ನೀವು ಮತ್ತೊಮ್ಮೆ ಸಿಎಂ ಆಗಿ. ಆದರೆ, ಮೋದಿ ವಿರುದ್ಧ ಧೈರ್ಯವಾಗಿ ಮಾತನಾಡಿ, ಜಾತಿ ನೋಡಿ ಟಿಕೆಟ್ ಕೊಡುವುದನ್ನ ಬಿಡಿ ಅಂತಾ ತಿಳಿಸಿದರು. ನಂತರ ಕಾರ್ಯಕ್ರಮದಲ್ಲಿ ಮಾತಾನಾಡಿದ, ಮಾಜಿ ಸ್ವೀಕರ್ ರಮೇಶ್ ಕುಮಾರ್, ನೀವೇ ಸಾಕಿದ ಗಿಣಿಗಳು ಅಂತಾ ಸಿದ್ದರಾಮಯ್ಯರಿಗೆ ಹಾಡು ಹಾಡಿದರು. ಅನರ್ಹ ಶಾಸಕರು ಕೇಳಿದ್ದೆಲ್ಲ ಕೊಟ್ರಿ. ಆದರೆ, ಅವರು ಕುಕ್ಕಿ ಹೋಗಿದ್ದಾರೆ. ನಿಮ್ಮ ಮುಖದ ಮೇಲೆ ಗಾಯ ಆಗಿದ್ದು, ಅದನ್ನ ಹೋಗಲಾಡಿಸಬೇಕಿದೆ ಅಂತಾ ಹೇಳಿದರು.