ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದ್ದು, ಇದೇ ಪ್ರಕರಣವನ್ನಿಟ್ಟುಕೊಂಡು ಪ್ರತಿಪಕ್ಷಗಳು ವಿಧಾನಸೌಧದಲ್ಲಿ ಆಡಳಿತ ಪಕ್ಷದ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.
ದಿನಕಳೆದಂತೆ ಜಾರಕಿಹೊಳಿ ಸಿಡಿ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಜಾರಿ ನಿರ್ದೇಶನಾಯಲಯದ ಅಂಗಳಕ್ಕೆ ಬಂದು ನಿಂತಿದೆ. ಸಿಡಿ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಹಣದ ವಹಿವಾಟು ನಡೆದಿರೋ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆ ಮಾಡಲಾಗಿದೆ.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಡಿಗೆ ದೂರು ನೀಡಿದ್ದು, ಸ್ವತಃ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಆಧಾರದ ಮೇಲೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ ದುರ್ಮರಣ
ಈ ಬಗ್ಗೆ ಕಾಂಗ್ರೆಸ್ ಮುಖಂಡ ಪುಟ್ಟರಾಜು ಮಾಧ್ಯಮಗಳೊಂದಿಗೆ ಮಾತನಾಡಿ, 5 ಕೋಟಿ, 20 ಕೋಟಿ ಹಾಗೂ 100 ಕೋಟಿವರೆಗೆ ಹಣ ವಹಿವಾಟು ನಡೆದಿದೆ ಎಂದು ರಮೇಶ್ ಜಾರಕಿಹೊಳಿಯವರೆ ಹೇಳಿದ್ದರು. ಸಿಡಿಯಲ್ಲಿದ್ದ ಯುವತಿಗೆ ವಿದೇಶದಲ್ಲಿ ಎರಡು ಫ್ಲಾಟ್ ಕೊಡಿಸಲಾಗಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಬಹಿರಂಗವಾಗಿಯೇ ಹಣದ ಹರಿವಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಇಡಿ ಹಾಗೂ ಐಟಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕೇಸ್ನಲ್ಲಿ ಹವಾಲಾ ಹಣ ಹರಿದಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಇಡಿಗೆ ದೂರು ಕೊಟ್ಟಿದ್ದೇವೆ ಎಂದು ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿಯ ಕಾರ್ಯದರ್ಶಿ ಪುಟ್ಟರಾಜು ತಿಳಿಸಿದರು.
2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದೂರು ದಾಖಲು ಮಾಡಿ ತನಿಖೆ ಕೈಗೊಳ್ಳಲು ಮನವಿ ಮಾಡಿದ್ದು, ಸಿಡಿ ಈಗ ಕೇಂದ್ರ ಆರ್ಥಿಕ ಅಪರಾಧ ತನಿಖಾ ಸಂಸ್ಥೆಯ ಅಂಗಳಕ್ಕೂ ಬಂದಿದ್ದು, ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.