ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದೂರು ಮುಕ್ತಾಯವಾಗುವ ಕುರಿತು ಅನಗತ್ಯ ಭಯ ಬೇಡ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆದರೆ, ಸಮಯಾವಕಾಶದ ಕೊರತೆ ಕಾರಣಕ್ಕಾಗಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಈ ವೇಳೆ ಯುವತಿ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಆತಂಕ ವ್ಯಕ್ತಪಡಿಸಿ, ರಮೇಶ್ ಜಾರಕಿಹೊಳಿ ವಿರುದ್ಧದ ದೂರು ಮುಕ್ತಾಯವಾಗುವ ಸಾಧ್ಯತೆ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯ ಅಡ್ವೊಕೇಟ್ ಜನರಲ್ ಈಗಲೇ ದೂರು ಮುಕ್ತಾಯಗೊಳಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ನ್ಯಾಯಾಲಯ ಕೂಡ ಆ ಬಗ್ಗೆ ಸೂಚನೆ ನೀಡಿದೆ. ಆದ್ದರಿಂದ ನೀವು ಈ ವಿಚಾರವಾಗಿ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿರಿ: ಕಾಲೇಜು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಆರಂಭ... ಜು.16ಕ್ಕೆ ತಾತ್ಕಾಲಿಕ ಪಟ್ಟಿ ಪ್ರಕಟ
ಕಳೆದ ವಿಚಾರಣೆ ವೇಳೆ ಸಿಡಿ ಪ್ರಕರಣದ ತನಿಖೆ ಮುಕ್ತಾಯ ಹಂತ ತಲುಪಿದೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿತ್ತು. ಇದೇ ವೇಳೆ ಸಿಬಿಐ ತನಿಖೆ ಕೋರಿರುವ ಅರ್ಜಿಯಲ್ಲಿ ತಮ್ಮ ವಾದವನ್ನೂ ಪರಿಗಣಿಸಬೇಕೆಂದು ಯುವತಿ ಅರ್ಜಿ ಸಲ್ಲಿಸಿದ್ದು, ದೂರು ಮುಕ್ತಾಯಗೊಳಿಸದಂತೆ ಕೋರಿದ್ದರು. ನ್ಯಾಯಾಲಯವೂ ಕೂಡ ತನ್ನ ಅನುಮತಿಯಿಲ್ಲದೆ ಮುಕ್ತಾಯ ವರದಿ ಸಲ್ಲಿಸಬಾರದು ಎಂದು ಸೂಚನೆ ನೀಡಿದೆ.