ಬೆಂಗಳೂರು: ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕೇಳಿ ಬಂದಿರುವ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ಸಂಪೂರ್ಣ ಮಾಹಿತಿ ಕೋರಿ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಪೊಲೀಸರು ನೊಟೀಸ್ ನೀಡಿದ್ದಾರೆ.
ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಗೆ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಸಂಬಂಧ ನಿನ್ನೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ದಿನೇಶ್ ಕಲ್ಲಹಳ್ಳಿ ಸಿಡಿ ಸಮೇತ ದೂರು ನೀಡಿದ್ದರು. ಯುವತಿಯೊಂದಿಗೆ ರಮೇಶ್ ಜಾರಕಿಹೊಳಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎನ್ನಲಾದ ಖಾಸಗಿ ವಿಡಿಯೋ ಬಹಿರಂಗವಾಗಿತ್ತು. ಈ ಸಂಬಂಧ ಸಂತ್ರಸ್ತೆ ಪರವಾಗಿ ದೂರು ನೀಡಿರುವುದಾಗಿ ಹೇಳಿಕೆ ನೀಡಿದ್ದರು.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ಹಸ್ತಾಂತರ ಆದೇಶವನ್ನು ಕಮೀಷನರ್ ಕಮಲ್ಪಂತ್ ಮಾಡಿದ್ದರು. ಆದೇಶ ಹಿನ್ನೆಲೆ ಪರಿಶೀಲನೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರಿಗೆ ದಿನೇಶ್ ನೀಡಿದ ದೂರಿನಲ್ಲಿ ಮಾಹಿತಿ ಅಪೂರ್ಣ ಇತ್ತು. ಈ ಹಿನ್ನೆಲೆ ದಿನೇಶ್ ಕಲ್ಲಹಳ್ಳಿಗೆ ಕಬ್ಬನ್ ಪಾರ್ಕ್ ಪೊಲೀಸರು ನೊಟೀಸ್ ನೀಡಿದ್ದಾರೆ.
ಯುವತಿಗೆ ನಡೆದಿರುವ ಅನ್ಯಾಯ ಬಗ್ಗೆ ಸಂತ್ರಸ್ತೆಯ ಕುಟುಂಬ ಹಾಗೂ ಸಂಬಂಧಿಕರು ದಿನೇಶ್ ಕಲ್ಲಹಳ್ಳಿಯನ್ನು ಭೇಟಿ ಮಾಡಿ ಘಟನೆ ಬಗ್ಗೆ ಹೇಳಿದ್ದಾರೆ. ಅದರಂತೆ ಯುವತಿ ಪರವಾಗಿ ಸಾಮಾಜಿಕ ಕಾರ್ಯಕರ್ತ ದೂರು ನೀಡಿದ್ದಾರೆ. ಆದರೆ, ದೂರು ನೀಡುವಾಗ ಕುಟುಂಬಸ್ಥರ ಅಥವಾ ಸಂಬಂಧಿಕರ ವಿವರ ತಿಳಿಸಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ನೋಟಿಸ್ ನೀಡಿದ್ದಾರೆ.
ಸಿಸಿಬಿಗೆ ವರ್ಗಾವಣೆ ಸಾಧ್ಯತೆ
ಗಂಭೀರ ಪ್ರಕರಣವಾಗಿರುವುದರಿಂದ ಈ ಕೇಸ್ನ್ನು ಸಿಸಿಬಿಗೆ ಹಸ್ತಾಂತರಿಸಿಲು ಮೇಲಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಿಗಲಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಯುವತಿಯನ್ನು ಪತ್ತೆ ಹಚ್ಚಿ ಆಕೆಯಿಂದ ಪೊಲೀಸರು ಹೇಳಿಕೆ ಪಡೆಯಲಿದ್ದಾರೆ.
ಯೂಟ್ಯೂಬ್ಗೆ ನೊಟೀಸ್ ಸಾಧ್ಯತೆ
ಈಗಾಗಲೇ ದೂರು ಸ್ವೀಕರಿಸಿರುವ ಕಬ್ಬನ್‌ಪಾರ್ಕ್ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ ಯೂಟ್ಯೂಬ್ನಲ್ಲಿ ವಿಡಿಯೋ ಅಪ್ಲೋಡ್ ಆಗಿರುವುದು ರಷ್ಯಾದಲ್ಲಿ ಎಂಬುದನ್ನು ಕಂಡುಕೊಂಡಿದ್ದಾರೆ. ಸದ್ಯ ವಿಡಿಯೋ ಯೂಟ್ಯೂಬ್ನಲ್ಲಿ ಡಿಲೀಟ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಯೂಟ್ಯೂಬ್ ಸಂಸ್ಥೆಗೆ ನೊಟೀಸ್ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.