ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂಬಂಧ ಇಂದು ಎಸ್ಐಟಿ ಅಧಿಕಾರಿಗಳು, ಯುವತಿಯನ್ನು 4 ಗಂಟೆ 30 ನಿಮಿಷಗಳ ಕಾಲ ವಿಚಾರಣೆಗೆ ಒಳಪಡಿಸಿ, ಮಾಹಿತಿ ಪಡೆದಿದ್ದಾರೆ.
ಎಸಿಪಿ ಕವಿತಾ ಅವರು ಯುವತಿಯ ವಿಚಾರಣೆ ನಡೆಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕೆಂದು ಯುವತಿಗೆ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ಎಸ್ಐಟಿ ತಂಡವು ಯುವತಿಯನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದಿದೆ.
ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ಯುವತಿ ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ಹಾಜರಾಗಿದ್ದಳು. ಅಂತೆಯೇ ಎಸ್ಐಟಿ ತಂಡ ಬೆಳಗ್ಗೆ 10.30ಯಿಂದ 3ಗಂಟೆವರೆಗೆ ವಿಚಾರಣೆ ನಡೆಸಿದೆ.
ಕಳೆದ ನಾಲ್ಕು ದಿನಗಳಿಂದಲೂ ಯುವತಿಯ ತೀವ್ರ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಅತ್ಯಾಚಾರ ಕೇಸ್ ಸಂಬಂಧ ಎಸ್ಐಟಿ ಟೀಂ ಸಾಕಷ್ಟು ಮಾಹಿತಿ ಕಲೆಹಾಕಿದೆ. ಯುವತಿಯೂ ಸಾಕಷ್ಟು ಮಾಹಿತಿಯನ್ನು ಎಸ್ಐಟಿಗೆ ನೀಡಿದ್ದು, ಎಲ್ಲ ದಾಖಲೆಗಳನ್ನು ಕಲೆಹಾಕಿಕೊಂಡು ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸುವುದಕ್ಕೆ ಎಸ್ಐಟಿ ಪೊಲೀಸರು ಸಜ್ಜಾಗಿದ್ದಾರೆ.
ನಿನ್ನೆ ವಿಚಾರಣೆಗೆ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದರು. ಅನಾರೋಗ್ಯ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದಾಗಿ ಮಾಜಿ ಸಚಿವರ ಪರ ವಕೀಲ ಶ್ಯಾಮ್ ಸುಂದರ್ ತಿಳಿಸಿದ್ದರು.
ಇಂದು ಬಹುತೇಕ ಯುವತಿಯ ವಿಚಾರಣೆ ಅಂತ್ಯಗೊಳ್ಳಲಿದ್ದು, ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿಗಳ ಕುರಿತಾಗಿ ನಿನ್ನೆ ತೀವ್ರ ವಿಚಾರಣೆ ಒಳಪಡಿಸಲಾಗಿತ್ತು ಎನ್ನುವ ಮಾಹಿತಿ ಹೊರ ಬಿದ್ದಿದೆ.
ಯುವತಿಗೆ ಸಿಡಿ ಗ್ಯಾಂಗ್ನವರು ಹೇಗೆ ಪರಿಚಯ, ಸಿಡಿ ಬಿಡುಗಡೆ ಮಾಡುವುದಕ್ಕೆ ನೀವೇ ಹೇಳಿದರಾ, ನಿಮ್ಮ ಗಮನಕ್ಕೆ ಬರದ ಹಾಗೆಯೇ ಸಿಡಿ ಬಿಡುಗಡೆ ಆಯ್ತಾ, ಸಿಡಿ ಗ್ಯಾಂಗ್ನಲ್ಲಿ ಇರೋರಿಗೆ ಯಾರಿಗಾದ್ರೂ ಸಿಡಿಯನ್ನು ಕೊಟ್ಟಿದ್ರಾ, ಹೀಗೆ ಹಲವಾರು ಪ್ರಶ್ನೆಗಳನ್ನು ನಿನ್ನೆ ಯುವತಿಗೆ ಎಸ್ಐಟಿ ಟೀಂ ಕೇಳಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಡಿ ಗ್ಯಾಂಗ್ನ ಲೀಡರ್ ಅನಿಸಿಕೊಂಡಾತನಿಗೆ ಸಿಡಿ ಕೊಟ್ಟಿದ್ದಾಗಿ ಯುವತಿ ಹೇಳಿಕೆ ನೀಡಿದ್ದು, ಮಾನಸಿಕವಾಗಿ ಜಾರಕಿಹೊಳಿ ಹಿಂಸೆ ನೀಡಿದ್ದರಿಂದ ನಾನೇ ವಿಡಿಯೋ ಮಾಡಿದ್ದಾಗಿ ಹೇಳಿದ್ದಾಳೆ ಎನ್ನುವ ಶಾಕಿಂಗ್ ಮಾಹಿತಿ ಹೊರ ಬಂದಿದೆ.
ಬ್ಲಾಕ್ ಮೇಲ್ ಮಾಡಬೇಕು ಅಂತ ಯಾವುದೇ ಯೋಚನೆ ಇರಲಿಲ್ಲ. ಆದರೆ, ಬೇರೆ ಯಾರಾದರೂ ಬ್ಲಾಕ್ ಮೇಲ್ ಮಾಡಿದ್ರೆ ನನಗೆ ಗೊತ್ತಿಲ್ಲ ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ಎಳೆ - ಎಳೆಯಾಗಿ ಸಂತ್ರಸ್ತೆ ಯುವತಿ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಸಹ ಸಿಡಿ ಬಿಡುಗಡೆ ಹಾಗೂ ಸಿಡಿ ಗ್ಯಾಂಗ್ ಕುರಿತಾಗಿ ಎಸ್ಐಟಿ ತೀವ್ರ ವಿಚಾರಣೆ ಮಾಡಲಿದ್ದು, ಆಡುಗೋಡಿ ಟೆಕ್ನಿಕಲ್ ಸೆಂಟರ್ ಗೆ ಹಾಜರಾಗಿ ಐದನೇ ಸುತ್ತಿನ ವಿಚಾರಣೆಗೆ ಎದರಿಸುತ್ತಿದ್ದಾರೆ.
ಯುವತಿಯ ವಿಚಾರಣೆಯನ್ನು ತನಿಖಾಧಿಕಾರಿ ಎಸಿಪಿ ಕವಿತಾ ಮಾಡಲಿದ್ದಾರೆ. ಸಿಡಿ ಬಿಡುಗಡೆ ಮತ್ತು ಸಿ ಡಿ ಗ್ಯಾಂಗ್ನ ಕುರಿತು ಹೆಚ್ಚಿನ ವಿಚಾರಣೆ ಎಸ್ಐಟಿ ನಡೆಸಲಿದೆ ಎಂದು ತಿಳಿದು ಬಂದಿದೆ.