ಬೆಂಗಳೂರು: ತಮ್ಮ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಪರಮೇಶ್ವರ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಮೇಶ್ ಅವರನ್ನು ವಿಚಾರಣೆಗೆ ಕರೆದುಕೊಂಡು ಹೋಗಿದ್ದು ಮಾತ್ರ ಗೊತ್ತು. ಆದರೆ ವಿಚಾರಣೆಯಲ್ಲಿ ಏನು ನಡೆಯಿತು ಎಂದು ರಮೇಶ್ ನನಗೆ ಏನೂ ಹೇಳಲಿಲ್ಲ ಎಂದು ತಿಳಿಸಿದ್ರು.
ಜೊತೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸುವ ಸಂದರ್ಭದಲ್ಲಿ ನನಗೆ ರಮೇಶ್ ಬಗ್ಗೆ ಏನು ಕೇಳಲಿಲ್ಲ. ಸಿದ್ಧಾರ್ಥ ವಿದ್ಯಾಸಂಸ್ಥೆಯಲ್ಲಿ ರಮೇಶ್ ಅವರ ಪಾತ್ರ ಏನೂ ಇಲ್ಲ, ನನ್ನ ಜೊತೆ ಕ್ಷೇತ್ರಕ್ಕೆ ಬರುವುದನ್ನು ಬಿಟ್ಟರೆ ಸಿದ್ಧಾರ್ಥ ಸಂಸ್ಥೆಯಲ್ಲಿ ಸಣ್ಣ ಜವಾಬ್ದಾರಿಯನ್ನೂ ಅವರು ನಿಭಾಯಿಸಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಸುಳಿವು ಮಾಧ್ಯಮಗಳ ವರದಿ ನೋಡಿ ತಿಳಿಯಿತು. ಹೀಗಾಗಿ ನಾವು ಎಚ್ಚೆತ್ತು ಪೊಲೀಸರಿಗೆ ಈ ವಿಷಯವನ್ನು ತಿಳಿಸಿದೆವು. ಜೊತೆಗೆ ನಮ್ಮವರನ್ನು ಅಲ್ಲಿಗೆ ಕಳಿಸಿದ್ವಿ. ಆದರೆ ಅಷ್ಟರಲ್ಲಿ ಈ ಅನಾಹುತ ನಡೆದು ಹೋಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದು ಬೆಳಗಿನ ಜಾವ ವರೆಗೂ ನಡೆದ ಐಟಿ ದಾಳಿ ಮುಗಿದ ನಂತರ ರಮೇಶ್ ಗೆ ಧೈರ್ಯ ತುಂಬಿದ್ದೇನೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗುವುದು ಸಹಜ, ಹೆದರಬೇಡ ನಾನಿದ್ದೇನೆ ಎಂದು ಧೈರ್ಯ ತುಂಬಿದೆ ಎಂದು ತಿಳಿಸಿದ್ರು.
ಐಟಿ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದ ಮೃತ ರಮೇಶ್ ಸಂಬಂಧಿಕರು:
ಇತ್ತ ರಮೇಶ್ ಆತ್ಮಹತ್ಯೆ ಪ್ರಕರಣ ಸಂಬಂಧ ರಮೇಶ್ ಸಂಬಂಧಿಕರು ಅವರು ಐಟಿ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ರಮೇಶ್ ಸಾವಿಗೆ ಐಟಿ ಇಲಾಖೆ ಹಾಗೂ ಬಿಜೆಪಿಯೇ ನೇರ ಕಾರಣ. ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಎಷ್ಟು ಸರಿ? ಅಲ್ಲದೆ, ದಾಳಿ ಪ್ರಮುಖ ರೂವಾರಿಯೇ ಬಿಜೆಪಿ ಎಂದು ರಮೇಶ್ ಸಂಬಂಧಿಕರು ಧಿಕ್ಕಾರ ಕೂಗಿದರು.