ಬೆಂಗಳೂರು: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಬೇಕು. ಸೇವಾ ಭದ್ರತೆ ನೀಡುವುದರ ಜೊತೆಗೆ 12 ತಿಂಗಳು ಉದ್ಯೋಗ, ರಜಾ ದಿನಗಳಲ್ಲಿ ವೇತನ, ಅಧ್ಯಾಪಕಿಯರಿಗೆ ಹೆರಿಗೆ ಸೌಲಭ್ಯ ನೀಡಬೇಕೆಂದು ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಅವರು, ಕರ್ನಾಟಕದ ಸುಮಾರು 412 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಹಲವಾರು ಬೇಡಿಕೆಗಳ ಮಧ್ಯೆಯೂ ಇದುವರೆಗೆ ರಾಜ್ಯ ಸರ್ಕಾರ ಅವರಿಗೆ ಸೇವಾ ಭದ್ರತೆಯನ್ನಾಗಲಿ ಅಥವಾ ಹೆಚ್ಚುವರಿ ಗೌರವಧನವನ್ನಾಗಲಿ ನೀಡಿರುವುದಿಲ್ಲ.
ರಾಜ್ಯ ಸರ್ಕಾರವು ಈ ಕೂಡಲೇ ಅತಿಥಿ ಉಪನ್ಯಾಸಕರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸಿ, ಪ್ರತಿ ಮಾಹೆ ಕನಿಷ್ಠ 25 ಸಾವಿರ ರೂ.ಗಳ ಗೌರವಧನವನ್ನು ಪಾವತಿ ಮಾಡಬೇಕೆಂದು ಕೋರಿದ್ದಾರೆ. ಅಲ್ಲದೇ, ರಜೆಯ ಅವಧಿಯನ್ನು ಕಡಿತಗೊಳಿಸದೆ ಮತ್ತು ಸೇವಾ ಅವಧಿಯನ್ನು ಕಡಿತಗೊಳಿಸದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧ್ಯಾಪಕರಿಗೆ ಹೆರಿಗೆ ಭತ್ಯೆ ಸೌಲಭ್ಯವನ್ನು ರಜಾ ಮತ್ತು ಗೌರವಧನ ಸಹಿತವಾಗಿ ನೀಡಲು ಸೂಕ್ತ ಆದೇಶ ಹೊರಡಿಸಬೇಕಾಗಿ ಕೋರಿದ್ದಾರೆ.
ರಾಜ್ಯದಲ್ಲಿರುವ ಪದವಿ ಕಾಲೇಜುಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸಿ, ಅವರ ಗೌರವಧನ ಹೆಚ್ಚಳದೊಂದಿಗೆ ಸೇವಾ ಭದ್ರತೆಯನ್ನು ದೊರಕಿಸಿಕೊಡಲು ರಾಜ್ಯ ಸರ್ಕಾರವನ್ನು ಪತ್ರದ ಮೂಲಕ ರಮೇಶ್ ಬಾಬು ಕೋರಿದ್ದಾರೆ.