ಬೆಂಗಳೂರು: ರಾಜ್ಯದಲ್ಲಿ ಅತಿ ಹೆಚ್ಚು ಹಗರಣಗಳ ಸಚಿವರು ಯಾರಾದರೂ ಇದ್ದರೆ ಅದು ಗೃಹ ಸಚಿವ ಆರಗ ಜ್ಞಾನೇಂದ್ರ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದು, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನ ಸಂಘ ಪರಿವಾರದಿಂದ ಬಂದಿದೆ ಎಂದು ಜನಸಂಘದ ಅಂದಿನ ನಾಯಕ ಗಣೇಶ್ ಭಟ್ ಅವರ ಹೆಸರನ್ನು ಗೃಹ ಸಚಿವರು ಪದೇ ಪದೆ ಉಲ್ಲೇಖ ಮಾಡ್ತಾರೆ. ಅವರು ಗೃಹ ಸಚಿವರಾದ ಮೊದಲ ದಿನದಿಂದ ಇಲ್ಲಿಯವರೆಗೆ ಒಂದಲ್ಲ ಒಂದು ಹಗರಣ ಮಾಡಿಕೊಂಡು ಬಂದಿದ್ದಾರೆ. ಪಿಎಸ್ಐ ಹಗರಣದಲ್ಲಿ ವಿದ್ಯಾ ಹಾಗರಗಿಗೆ ಗೃಹ ಸಚಿವರು ಪರೋಕ್ಷ ಬೆಂಬಲ ನೀಡಿದ್ದಾರೆ. ಆರಗ ಜ್ಞಾನೇಂದ್ರರಿಂದಾಗಿಯೇ ಪಿಎಸ್ಐ ಹಗರಣದಲ್ಲಿ ಮೊದಲ ಬಾರಿಗೆ ಐಪಿಎಸ್ ಅಧಿಕಾರಿ ಅರೆಸ್ಟ್ ಆಗುವಂತಾಗಿದೆ ಎಂದು ಆರೋಪಿಸಿದರು.
ಇಡೀ ರಾಜಕಾರಣದಲ್ಲಿ ಸಜ್ಜನ ರಾಜಕಾರಣಿಗಳ ಪೈಕಿ ಕೆಲವೇ ಕೆಲವರಲ್ಲಿ ಕಿಮ್ಮನೆ ರತ್ನಾಕರ್ ಒಬ್ಬರು. ಕಿಮ್ಮನೆ ರತ್ನಾಕರ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಆರಗ ಜ್ಞಾನೇಂದ್ರ ವ್ಯವಸ್ಥಿತವಾಗಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಆರಗ ಜ್ಞಾನೇಂದ್ರ ಅವರು ನಾಲ್ಕು ಬಾರಿ ಸೋತಿದ್ದರು. ಜನಸಂಘದಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಸಜ್ಜನ ರಾಜಕಾರಣಿಗಳಲ್ಲಿ ಕಿಮ್ಮನೆ ರತ್ನಾಕರ್ ಅವರು ಒಬ್ಬರು. ಅವರ ವಿರುದ್ಧ ಪ್ರಾಮಾಣಿಕವಾಗಿ ಗೆಲ್ಲುವುದಕ್ಕೆ ಆಗುತ್ತಿಲ್ಲ.
ಆರಗ ಮಗನ ಕೈಯಲ್ಲಿ ಕ್ಷೇತ್ರ ಕೊಟ್ಟಿದ್ದಾರೆ: ಮಂಗಳೂರಿನಲ್ಲಿ ಒಂದು ಕಡ್ಡಟವನ್ನು ಮುಂದಿಟ್ಟುಕೊಂಡು ರತ್ನಾಕರ್ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತ ಕೆಲಸ ಮಾಡುತ್ತಿದ್ದಾರೆ. ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು. ಆರಗ ಜ್ಞಾನೇಂದ್ರ ಅವರ ಮಗನ ಕೈಯಲ್ಲಿ ಕ್ಷೇತ್ರವನ್ನು ಕೊಟ್ಟಿದ್ದಾರೆ. ಅವರ ಮೂಲಕ ಮರಳು ದಂಧೆ, ರಿಯಲ್ ಎಸ್ಟೇಟ್ ದಂಧೆ ರಾಜಾರೋಶವಾಗಿ ತೀರ್ಥಹಳ್ಳಿಯಲ್ಲಿ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಅದೇ ರೀತಿ ಕಿಮ್ಮನೆ ರತ್ನಾಕರ್ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ, ತಿರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ನ ಪ್ರಜಾ ಧ್ವನಿ ಯಾತ್ರೆಗೆ ಪ್ರಜಾ ಶೋಕ ಯಾತ್ರೆ ಎಂದು ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಬಾಬು, ಇವರ ಜನ ಸಂಕಲ್ಪ ಯಾತ್ರೆ ಎಷ್ಟು ಹಳೆಯದು. ಬಿಜೆಪಿ 2013ರಲ್ಲೂ ಜನ ಸಂಕಲ್ಪ ಅಂತ ಘೋಷಣೆ ಮಾಡಿತ್ತು. ಆಗ ಇದೇ ಜನ ಸಂಕಲ್ಪವನ್ನು ಜನ ತಿರಸ್ಕಾರ ಮಾಡಿದ್ರು. ಈಗಲೂ ಹಾಗೆಯೇ ಆಗುತ್ತದೆ. ಇವರ ಜನ ಸಂಕಲ್ಪಕ್ಕೆ ಜನರಿಂದ ಸ್ಪಂದನೆಯೇ ಸಿಗ್ತಿಲ್ಲ. ಹೀಗಾಗಿ ಬಿಜೆಪಿಯವರು ಕಾಂಗ್ರೆಸ್ನಿಂದ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಪಲಾಯನ ಮಾಡಬೇಡಿ: ಸಿಟಿ ರವಿ ಅವರು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಅಂತಾ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆ ಬಿಜೆಪಿಗೆ ಅಷ್ಟೇ ಅಲ್ಲ ಬರುವುದು, ಎಲ್ಲರಿಗೂ ಬರುತ್ತದೆ. ಲಕ್ಷ್ಮಣ್ ಅವರೂ ಮೈಸೂರಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತಾರೆ. ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಪಲಾಯನ ಮಾಡಬೇಡಿ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಹೇಳಿಕೆಗಳ ಮೂಲಕ ಕಾಂಗ್ರೆಸ್ ಬಗ್ಗೆ ಮಾತಾಡಿದರೆ, ಅದೇ ಹೇಳಿಕೆಗಳ ಮೂಲಕವೇ ಉತ್ತರ ಕೊಡುತ್ತೇವೆ. ಕಾನೂನು ಮೂಲಕ ಬಂದರೆ ನಾವು ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಎಲ್ಲದಕ್ಕೂ ತಯಾರಿದೆ ಎಂದು ಹೇಳಿದರು.
ಇದನ್ನೂ ಓದಿ: ಸುಳ್ಳು ಕಾಂಗ್ರೆಸ್ ಪಕ್ಷದ ಮನೆ ದೇವರು.. ನಿತ್ಯ ಸುಳ್ಳು ಹೇಳುವ ಕಾಯಕ ಸಿದ್ದರಾಮಯ್ಯ ಅವರದ್ದು: ಸಿಟಿ ರವಿ ವಾಗ್ದಾಳಿ